ಹೊಸದಿಗಂತ ಆನ್ಲೈನ್ ಡೆಸ್ಕ್:
ಆಫ್ರಿಕನ್ ರಾಷ್ಟ್ರ ಉತ್ತರ ಮೊಜಾಂಬಿಕ್ನ ಕ್ಯಾಬೊ ಡೆಲ್ಗಾಡೊ ಪ್ರಾಂತ್ಯದ ಮುವಾಟಿಡೆ ಹೆಸರಿನ ಗ್ರಾಮದಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರು ಫುಟ್ಬಾಲ್ ಮೈದಾನವನ್ನೇ ಮರಣದಂಡನೆ ಕಣವನ್ನಾಗಿಸಿ 50ಕ್ಕೂ ಹೆಚ್ಚು ಜನರ ತಲೆ ಕತ್ತರಿಸಿ ಕೊಲೆಗೈದಿರು ಆಘಾತಕಾರಿ ಘಟನೆ ನಡೆದಿದೆ.
ಮತ್ತೊಂದು ಗ್ರಾಮ ನಂಜಬದಲ್ಲಿ ಗುಂಡಿನ ದಾಳಿ ನಡೆಸಿರುವ ಮತ್ತೊಂದು ಉಗ್ರರ ಗುಂಪು ಗ್ರಾಮದ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ.
ನಂಜಾಬಾ ಗ್ರಾಮಕ್ಕೆ ಶುಕ್ರವಾರ ರಾತ್ರಿ ದಾಳಿ ನಡೆಸಿದ ಉಗ್ರರು ಅಲ್ಲಾಹು ಅಕ್ಬರ್ ಘೋಷಣೆ ಕೂಗುತ್ತ ಗ್ರಾಮಸ್ಥರ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಬಳಿಕ, ಗ್ರಾಮಸ್ಥರನ್ನು ಬಂಧಿಗಳನ್ನಾಗಿಸಿ ಕರೆದೊಯ್ದು ಫುಟ್ಬಾಲ್ ಮೈದಾನದಲ್ಲಿ ಕತ್ತು ಕತ್ತರಿಸಿ ಹತ್ಯೆ ಮಾಡಿದ್ದಾರೆ.
2017 ರಿಂದಾಚೆಗೆ ಕ್ಯಾಬೊ ಡೆಲ್ಗಾಡೊನಲ್ಲಿ ನಡೆದ ಅತ್ಯಂತ ಹೀನ ಕೃತ್ಯ ಇದು ಎಂದೇ ಹೇಳಲಾಗಿದೆ. ಈ ಪ್ರಾಂತ್ಯದಲ್ಲಿ 2017 ರಿಂದಾಚೆಗೆ 2,000 ಜನರನ್ನು ಕೊಲೆಗೈಯ್ಯಲಾಗಿದ್ದು ಸುಮಾರು 4,30,000 ಮಂದಿ ನಿರಾಶ್ರಿತರಾಗಿದ್ದಾರೆ. ಇನ್ನು ಘಟನೆ ನಡೆಸಿರುವ ಉಗ್ರರು ಇಸ್ಲಾಮಿಕ್ ಸ್ಟೇಟ್ ಜೊತೆಗೆ ನೇರ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ.
ಈ ಪ್ರದೇಶದಲ್ಲಿರುವ ಬಡತನ ಹಾಗೂ ನಿರುದ್ಯೋಗ ಸಮಸ್ಯೆಯನ್ನೇ ಬಂಡವಾಳವಾಗಿಸಿಕೊಂಡಿರೋ ಉಗ್ರರು ಇಲ್ಲಿನ ಯುವಕರನ್ನು ತಮ್ಮ ಜೊತೆ ಸೇರಿಸಿಕೊಂಡು ಕೃತ್ಯಗಳನ್ನು ಮೆರೆಯುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಘಟನೆ ಕಳೆದ ಶುಕ್ರವಾರದಿಂದ ಶನಿವಾರದವರೆಗೂ ನಡೆದಿದೆ ಎನ್ನಲಾಗಿದೆ. ಮೊದಲಿಗೆ ಉಗ್ರರು ಗ್ರಾಮದ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಉಗ್ರರಿಂದ ತಪ್ಪಿಸಿಕೊಳ್ಳಲು ಮುಂದಾದವರನ್ನು ಹಿಡಿದು ಫುಟ್ಬಾಲ್ ಮೈದಾನವೊಂದಕ್ಕೆ ಕರೆತಂದು ಅವರನ್ನ ಕೊಲೆಗೈಯ್ಯಲಾಗಿದೆ ಎನ್ನುವ ಮಾಹಿತಿ ಇದೆ.
ಆಫ್ರಿಕನ್ ರಾಷ್ಟ್ರಗಳ ಪೈಕಿ ದಕ್ಷಿಣ ಭಾಗದಲ್ಲಿರುವ ರಾಷ್ಟ್ರದಲ್ಲಿ ಐಎಸ್ ಉಗ್ರರ ಪ್ರಾಬಲ್ಯ ಹೆಚ್ಚಾಗಿದ್ದು, ಜನ ಕಂಗಾಲಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.