ಹೊಸದಿಗಂತ ಆನ್ ಲೈನ್ ಡೆಸ್ಕ್:
ದೇಶದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಏರಿಳಿತವಾಗುತ್ತಿದ್ದು, ಇದರ ನಡುವೆ ಸೋಂಕಿನ ವಿರುದ್ಧ ಹೋರಾಡಲು ಲಸಿಕೆಗಳು ಸಿದ್ಧವಾಗುತ್ತಿದೆ.
ದೇಶೀಯ ಲಸಿಕೆಗಳಿಗೆ ಈಗಾಗಲೇ ಅನುಮತಿಯೂ ಸಿಕ್ಕಿದೆ. ಈ ಹಿನ್ನೆಲೆ ಲಸಿಕೆ ವಿತರಣೆ ಸಂದರ್ಭ ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಕೇರಳ ಸರ್ಕಾರ ಮನವಿ ಮಾಡಿದೆ.
ಹೌದು, ಈ ಕುರಿತು ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿರುವ ಕೇರಳದ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ, ರಾಜ್ಯದಲ್ಲಿ ಕೊರೋನಾ ಲಸಿಕೆ ವಿತರಣೆಗೆ ಎಲ್ಲಾ ರೀತಿಯ ಸಿದ್ಧತೆಗಳೂ ಆಗಿವೆ. ಕೇಂದ್ರ ಯಾವ ಲಸಿಕೆಯನ್ನು ನೀಡಿದರೂ ಅದನ್ನು ಸ್ವೀಕರಿಸಲು ತಯಾರಿದ್ದೇವೆ. ಕೇರಳವನ್ನೇ ಆದ್ಯತೆಯಾಗಿಟ್ಟುಕೊಂಡು ಲಸಿಕೆ ವಿತರಣೆ ಮಾಡಬೇಕೆಂದು ತಿಳಿಸಿದ್ದಾರೆ.
ದೇಶದಲ್ಲಿ ಆರಂಭಿಕವಾಗಿ ಸೋಂಕು ಕಾಣಿಸಿಕೊಂಡ ರಾಜ್ಯ ಕೇರಳವಾಗಿದ್ದರೂ, ಸೋಂಕು ನಿಭಾಯಿಸುವಲ್ಲಿ ರಾಜ್ಯ ಗೆದ್ದಿತ್ತು. ಆದರೆ ಈಚೆಗೆ ಇಲ್ಲಿನ ಕೊರೋನಾ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆ. ಇದರ ಜೊತೆಗೆ ಜನಸಂಖ್ಯೆ ಹಾಗೂ ರಾಜ್ಯದಲ್ಲಿ ಹೃದಯ ಸಂಬಂಧಿ, ಮಧುಮೇಹ ಸಮಸ್ಯೆ ಪ್ರಕರಣಗಳು ಹೆಚ್ಚಿರುವುದನ್ನು ಗಣನೆಗೆ ತೆಗೆದುಕೊಂಡು ರಾಜ್ಯಕ್ಕೆ ಆದ್ಯತೆಯಲ್ಲಿ ಲಸಿಕೆ ನೀಡಬೇಕು ಎಂದು ಶೈಲಜಾ ಹೇಳಿದ್ದಾರೆ.
ಸಾಮಾಜಿಕ ಅಂತರ, ಸ್ಯಾನಿಟೈಸರ್, ಮಾಸ್ಕ್ ಬಳಕೆಯಿಂದ ಹಿಡಿದು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಕೆಲವು ತಿಂಗಳ ಕಾಲ ಸೋಂಕು ಹರಡುವಿಕೆಯನ್ನು ಹಿಡಿತದಲ್ಲಿಟ್ಟುಕೊಂಡಿದ್ದ ಕೇರಳದಲ್ಲಿ ಕಳೆದ ಎರಡು ತಿಂಗಳಿನಿಂದ ಭಾರೀ ಪ್ರಮಾಣದಲ್ಲಿ ಕೊರೋನಾ ಸೋಂಕು ಏರುತ್ತಿದೆ.
ಸದ್ಯ ಕೇರಳದಲ್ಲಿ ಮಂಗಳವಾರ 5615 ಹೊಸ ಕೊವಿಡ್ ಪ್ರಕರಣಗಳು ದಾಖಲಾಗಿದ್ದು, ದೇಶದಲ್ಲಿ ಈಗ ದಾಖಲಾಗುತ್ತಿರುವ ನೂತನ ಪ್ರಕರಣಗಳಲ್ಲಿ ಶೇ.25ರಷ್ಟು ಪಾಲು ಕೇರಳದ್ದಾಗಿದೆ. ಆ ಮೂಲಕ ಕೇರಳದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 78,4488 ಕ್ಕೆ ಏರಿದೆ. ಇನ್ನೊಂದೆಡೆ, ಬ್ರಿಟನ್ನ ರೂಪಾಂತರಿ ಕೊರೋನಾ ಸೋಂಕು ಕೇರಳಕ್ಕೆ ಆಗಮಿಸಿದ 6 ಮಂದಿಯಲ್ಲಿ ಧೃಡಪಟ್ಟಿದೆ.