ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ದೇಶದ ಧ್ವಜದ ಕುರಿತು ಸಾಕಷ್ಟು ಊಹಾಪೋಹಗಳಿಗೆ ತಡೆಹಾಕಲು ಐರ್ಲ್ಯಾಂಡ್ ನ ಮಾರ್ಗರೇಟ್ ಎಲಿಜಿಬತ್ ನೋಬಲ್ (ಸೋದರಿ ನಿವೇದಿತಾ) ಅವರು ವಿಶಿಷ್ಟ ಕೊಡುಗೆಯನ್ನು ನೀಡಿದ್ದಾರೆ. ಅವರು ಭಾರತ ರಾಷ್ಟ್ರೀಯ ಧ್ವಜದ ಅಗತ್ಯತೆಯ ಪ್ರಾಮುಖ್ಯತೆಯನ್ನು ಪ್ರಚಾರ ಮಾಡಿದವರು. 1904-5ರಲ್ಲಿ ಅವರ ಕಲ್ಪನೆಯ ರಾಷ್ಟ್ರೀಯ ಧ್ವಜವನ್ನು ಭಾರತದಲ್ಲಿ ಪರಿಚಯಿಸಿದರು. ಆಕೆ ಸ್ವತಂತ್ರ್ಯ ಚಿಂತಕಿಯಾಗಿದ್ದು, ಭಾರತಕ್ಕೆ ಆಕೆಯ ಕೊಡುಗೆ ಅವಳದೇ ಜೀವನದ ಕಥೆಯಷ್ಟೇ ವಿಶಿಷ್ಟವಾಗಿತ್ತೆಂಬುದು ಸತ್ಯ.
ಸೋದರಿ ನಿವೇದಿತಾ, ಸ್ವಾಮಿ ವಿವೇಕಾನಂತರ ವಿಚಾರಧಾರೆಗಳಿಂದ ಪ್ರಭಾವಿತಳಾಗಿ ಭಾರತದ ಸೇವೆ ಮಾಡಲು 1898ರಂದು ಕೊಲ್ಕತ್ತಾಗೆ ಬಂದು ತಲುಪಿದಳು. ಸೋದರಿ ನಿವೇದಿತಾಳನ್ನು ಸಾಕ್ಷಾತ್ ಸಿಂಹಿಣಿಯ ರೂಪವಾಗಿ ಭಾರತದ ಸೇವೆ ಸಲ್ಲಿಸಲು ತಯಾರು ಮಾಡಿಯೇ ಆಕೆಯನ್ನು ಭಾರತಕ್ಕೆ ಸ್ವಾಮಿ ವಿವೇಕಾನಂದರು ಕರೆಸಿಕೊಂಡರು. ಕೊಲ್ಕತ್ತಾಗೆ ಬಂದ ಸೋದರಿ ನಿವೇದಿತಾಗೆ ಇಲ್ಲಿಂದ ಭಾರತೀಯ ಶಿಕ್ಷಣ ಪ್ರಾರಂಭಿಸಿದರು, ಸಾಧು, ಸಂತರ ಭೋದನೆಗಳಿಗೂ ವಿವೇಕಾನಂದರು ವ್ಯವಸ್ಥೆ ಮಾಡಿದ್ದರು.
ಭಾರತದ ಇತಿಹಾಸ, ಪರಂಪರೆ, ಸಂಸ್ಕೃತಿ, ಸಂಪ್ರದಾಯ, ಜಾತಿ ಪದ್ಧತಿಗಳ ಕುರಿತು ತಿಳಿಸುವುದು ಮುಖ್ಯವಾಗಿತ್ತು. ಭಾರತವನ್ನು ಪ್ರೀತಿಸು, ಭಾರತದ ಸೇವೆ ಮಾಡು, ಈ ದೇಶವನ್ನು ಪೂಜಿಸು ಇದೇ ನೀನು ನನಗೆ ಸಲ್ಲಿಸಬೇಕಾದ ಸೇವೆ ಎಂದು ಸ್ವಾಮಿ ವಿವೇಕಾನಂದರು ತಿಳಿಸಿದ್ದರು.
ಮಾರ್ಚ್ 25.1898ರಂದು ಮಾರ್ಗರೇಟ್ ಳಿಗೆ ದೀಕ್ಷೆ ನೀಡಿ ನಿವೇದಿತಾ ಎಂದು ಮರುನಾಮಕರಣ ಮಾಡಿದರು. ಭಾರತದಲ್ಲಿನ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡಿದ ಅಕ್ಕ ನಿವೇದಿತಾ 1898ರ ನವೆಂಬರ್ ನಲ್ಲಿ ಶಾಲೆ ಪ್ರಾರಂಭಿಸಿ, ಶ್ರೀ ಮಾತೆ ಶಾರದಾದೇವಿಯವರಿಂದ ಶಾಲೆಯನ್ನು ಉದ್ಘಾಟನೆ ಮಾಡಿಸಿ, ಆಶಿರ್ವಾದ ಪಡೆದಳು. ಈ ಶಾಲೆಯಲ್ಲಿ ಮಕ್ಕಳ ಆಸಕ್ತಿಗೆ ಹಾಗೂ ಮನೋವೃತ್ತಿಗಳಿಗೆ ಅನುಗುಣವಾಗಿ ಶಿಕ್ಷಣ ನೀಡುತ್ತಿದ್ದಳು ಅಕ್ಕ ನಿವೇದಿತಾ. ಮಕ್ಕಳಿಗೆ ಅಕ್ಷರಾಭ್ಯಾಸ, ಹಿರಿಯರಿಗೆ ರಾಷ್ಟ್ರೀಯತೆ, ಪ್ರೀತಿ ಮತ್ತು ಸೇವೆಯ ಕುರಿತು ಕಲಿಸುತ್ತಿದ್ದಳು.
ಹೀಗೆ ಅಚ್ಚುಕಟ್ಟಿನಿಂದ ನಡೆಯುತ್ತಿದ್ದ ಶಾಲೆಯನ್ನು ಆರ್ಥಿಕ ಪರಿಸ್ಥಿತಿಯಿಂದ ಮುಚ್ಚಬೇಕಾಗಿತ್ತು. ಬಳಿಕ ಸ್ವಾಮಿ ವಿವೇಕಾನಂದರು ಆಕೆಯನ್ನು ಸಮಾಧಾನ ಪಡಿಸಿದರು. ಬಳಿಕ ನಿವೇದಿತಾ ವಿದೇಶಕ್ಕೆ ತೆರಳಿ ಶಾಲೆಗೆ ಹಣ ಸಂಗ್ರಹ ಮಾಡಲು ತೀರ್ಮಾನಿಸಿದಳು. ಈ ವೇಳೆ ಅಕ್ಕ ನಿವೇದಿತಾ ಭಾಷಣಕಾರಳಾಗಿ ಬೆಳೆದಳು. ಆಕೆಯನ್ನು ವಿದೇಶಿಗಳು ಹಾಗು ಅನ್ಯ ಜಾತಿಯವಳೆಂದು ದೇವಾಲಯಕ್ಕೆ ಪ್ರವೇಶವನ್ನು ನಿರ್ಬಂಧಿಸಿದ್ದರೂ ಆಕೆ ಕಾಳಿ ಹಾಗೂ ಕಾಳೀ ಪೂಜೆಯ ಬಗ್ಗೆ ಮಾಡಿದ ಭಾಷಣ ಜನರ ಮೆಚ್ಚುಗೆಗೆ ಪಾತ್ರವಾಯಿತು. ಕೆಲವು ತಿಂಗಳುಗಳಲ್ಲಿ ಕೊಲ್ಕತ್ತಾ ಮಹಾಮಾರಿ ಪ್ಲೇಗ್ ನಿಂದ ಬಳಲುತ್ತಿದ್ದ ಕಾಲದಲ್ಲಿ ಅಕ್ಕ ನಿವೇದಿತಾ ರಾಮಕೃಷ್ಣ ಮಿಷನ್ ನ ಪ್ಲೇಗ್ ಕಮಿಟಿಯ ಕಾರ್ಯದರ್ಶಿಯಾಗಿ ಹಗಲು ರಾತ್ರಿಯೆನ್ನದೆ ಜನರಿಗಾಗಿ ಶ್ರಮಿಸಿದಳು.
ಈ ಕಾರ್ಯವನ್ನು ನೋಡಿದ ಜನತೆ ಆಕೆಯನ್ನು ಪ್ರೀತಿಯಿಂದ ಅಕ್ಕ ನಿವೇದಿತಾ ಎಂದು ಕರೆಯಲಾರಂಭಿಸಿದರು.ಅಕ್ಕ ನಿವೇದಿತಾ ಭಾರತಕ್ಕೆ ನೀಡಿದ ಬಹು ಮುಖ್ಯ ಕಾರ್ಯವೆಂದರೆ ರಾಷ್ಟ್ರೀಯತೆಯನ್ನು ಅವರ ಪೂರ್ಣ ವಿಶಾಲತೆಯನ್ನು ಭಾರತೀಯರಿಗೆ ಅರ್ಥಗರ್ಭಿತವಾಗಿ ತಿಳಿಸಿದ್ದಳು. ಸರ್ಕಾರದ ಯೂನಿವರ್ಸಿಟಿಗಳು, ದಿ ಡಾನ್ ಸೊಸೈಟಿ, ಅನುಶೀಲನ ಸಮಿತಿ ಮೊದಲಾದ ಸಂಸ್ಥೆಗಳ ಮೊದಲ ಮಹಿಳಾ ಸದಸ್ಯೆಯಾಗಿ ಸೇವೆ ಸಲ್ಲಿಸುವುದಲ್ಲದೇ, ಭಾರತೀಯ ಸಮಸ್ಯೆಗಳನ್ನೊಳಗೊಂಡ ಭಾಷಣಗಳನ್ನು ನೀಡುತ್ತಿದ್ದಳು. ಜುಲೈ.20ರಂದು ಬಂಗಾಳ ವಿಭಜನೆಯ ನಿರ್ಧಾರ ಘೋಷಣೆಯಾದ ನಂತರ ಸೋದರಿ ನಿವೇದಿತಾ ಸ್ವತಃ ತಾನೇ ಸ್ವದೇಶಿ ವಸ್ತುಗಳನ್ನು ಮಾರಾಟ ಮಾಡಲಾರಂಭಿಸಿದಳು.
1906ರಲ್ಲಿ ಶತ್ರುಗಳನ್ನೊಳಗೊಂಡು ತೀವ್ರಗಾಮಿಗಳ ನಡವಳಿಕೆ ಅವಳಿಗೆ ಬೇಸರ ತಂದಿತು. ರಾಷ್ಟ್ರೀಯ ಏಕತಾಭಾವನೆ ಬೆಳೆಸಿಕೊಳ್ಳಲು ಭಾರತೀಯರಿಗೆ ಕರೆ ನೀಡಿದರು.ಈ ನಡುವೆ ರಾಷ್ಟ್ರಧ್ವಜ ರೂಪಿಸುವ ಪ್ರಯತ್ನದಲ್ಲಿ ಅಕ್ಕ ನಿವೇದಿತಾ ನಿಸ್ವಾರ್ಥತೆಯ ಸಂಕೇತ, ಇಂದ್ರನ ದಿವ್ಯಾಸ್ತ್ರ, ದಧೀಚಿಯ ಕೊಡುಗೆಯಾಗಿರುವ ವಜ್ರಾಯುಧವೇ ಧ್ವಜದ ಸಂಕೇತ ಎಂದು ಅಕ್ಕ ನಿವೇದಿತಾ ಭಾರತ ಧ್ವಜವನ್ನು ರೂಪಿಸಿದಳು.
ಭಾರತದಲ್ಲಿ ವಜ್ರ ಎಂದರೆ ಗೌರವ, ಜ್ಞಾನ, ಪವಿತ್ರತೆ, ಶಕ್ತಿ ಮತ್ತು ದಿವ್ಯತೆಗಳ ಸಂಕೇತವಾಗಿದೆ. ನಿಸ್ವಾರ್ಥದಿಂದ ಜೀವಿಸುವವನೇ ವಜ್ರ. ನಾವು ಸ್ವಾರ್ಥದಿಂದ ದೂರವಾಗಿರಬೇಕು. ಕೀರ್ತಿ ಸಂಪತ್ತು, ಸುಖ ಇವೆಲ್ಲವೂ ನಮ್ಮ ಮೇಲೆ ಪ್ರಭಾವಭೀರದಿರಲಿ ಎಂದು ಅಕ್ಕ ನಿವೇದಿತಾ ಹೇಳುತ್ತಾಳೆ.
ವಂದೇ ಮಾತರಂ ಮಂತ್ರದೊಂದಿದೆ ವಜ್ರವನ್ನೊಳಗೊಂಡ ರಾಷ್ಟ್ರಧ್ವಜವನ್ನು ತನ್ನ ಶಾಲೆಯ ಮಕ್ಕಳ ಮೂಲಕ ತಯಾರಿಸಿ ಅದನ್ನು 1906ರ ಕಾಂಗ್ರೆಸ್ ವಸ್ತು ಪ್ರದರ್ಶನದಲ್ಲಿ ಇರಿಸಿದ್ದಳು.
-ಕೃಷ್ಣಸಖಿ