Tuesday, July 5, 2022

Latest Posts

ಮೊದಲ ಭೇಟಿಯಲ್ಲೇ ಕೆಪಿಸಿಸಿ ರಾಜ್ಯಾಧ್ಯಕ್ಷರಿಗೆ ಉಡುಪಿಯ ಭಿನ್ನಮತದ ದರುಶನ

ಹೊಸ ದಿಗಂತ ವರದಿ, ಉಡುಪಿ:

ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ರಾಜ್ಯಾಧ್ಯಕ್ಷ ಬಳಿಕ ಡಿ.ಕೆ. ಶಿವಕುಮಾರ್ ಉಡುಪಿ ಜಿಲ್ಲೆಗೆ ಮೊದಲ ಸಲ ಭೇಟಿ ಕೊಟ್ಟಿದ್ದಾರೆ. ಈ ವೇಳೆ ಕಾಂಗ್ರೆಸ್‌ನ ಭಿನ್ನಮತ ಮತ್ತೆ ಪ್ರದರ್ಶನವಾಗಿದೆ. ಡಿಕೆಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಗೈರಾಗಿದ್ದಾರೆ. ಜೊತೆಗೆ ಮೊದಲ ಬಾರಿ ಜಿಲ್ಲೆಗಾಗಮಿಸುವ ಕೆಪಿಸಿಸಿ ಅಧ್ಯಕ್ಷರನ್ನು ಪ್ರಮೋದ್ ಮಧ್ವರಾಜ್ ಸ್ವಾಗತಿಸುವ ಬ್ಯಾನರ್, ಕಟೌಟ್ ಕೂಡ ಇರಲ್ಲಿಲ್ಲ.
ಈ ಭಿನ್ನಮತ ಅಷ್ಟಕ್ಕೇ ನಿಲ್ಲದೇ ಸಮಾವೇಶ ನಡೆಯುವ ಸ್ಥಳದಲ್ಲಿ ಪ್ರಮೋದ್ ಮಧ್ವರಾಜ್ ಬೆಂಬಲಿಗರು ಪೆಂಡಾಲ್ ಹಾಕಿ ಮೌನ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದರು. ಡಿಕೆಶಿ ಸಮಾವೇಶ ಸ್ಥಳಕ್ಕೆ ಬಂದಿಳಿಯುತ್ತಿದ್ದಂತೆ ಉಡುಪಿಯ ಬಣ ರಾಜಕೀಯ ಜಗಜ್ಜಾಹೀರಾಯಿತು. ಸಭಾಂಗಣದ ಆವರಣದಲ್ಲಿ ವಿವಿಧ ಬಣದ ಮುಖಂಡರು, ಕಾರ್ಯಕರ್ತರು ಡಿಕೆಶಿ ಅವರ ಮುಂದೆ ಕಾಣಿಸಿಕೊಳ್ಳಲು ಹರಸಾಹಸ ಪಟ್ಟರು. ಜಿಲ್ಲಾ ಕಾಂಗ್ರೆಸ್, ಬ್ಲಾಕ್ ಕಾಂಗ್ರೆಸ್, ಯುವ ಕಾಂಗ್ರೆಸ್, ಮಧ್ವರಾಜ್ ಬಣ, ಎನ್‌ಎಸ್‌ಯುಐ, ಸೇವಾದಳ ಸಹಿತ ವಿವಿಧ ಘಟಕಗಳು ಡಿಕೆಶಿ ಅವರನ್ನು ಅಕ್ಷರಶಃ ಎಳೆದಾಡಿದರು.
ಸಮಾವೇಶ ಉದ್ಘಾಟಿಸಿ ಮಾತನಾಡಿದ ಡಿ.ಕೆ. ಶಿವಕುಮಾರ್, ಅಧಿಕಾರ ಎಲ್ಲರಿಗೂ ಸಿಗುತ್ತದೆ. ಆದರೆ ಮೊದಲು ಶಿಸ್ತು ಇರಬೇಕು. ಉಡುಪಿ ಜಿಲ್ಲೆಯಲ್ಲಿ ಒಬ್ಬರೇ ಒಬ್ಬ ಕಾಂಗ್ರೆಸ್ ಶಾಸಕರಿಲ್ಲ. ಎಲ್ಲಿ ತ್ಯಾಗ, ಶ್ರಮ ಇಲ್ಲವೋ ಅಲ್ಲಿ ಬೆಲೆ, ಫಲ ಇರುವುದಿಲ್ಲ. ನನ್ನಿಂದಲೇ ಪಕ್ಷ ಅಂತ ಅಂದುಕೊಂಡಿದ್ದರೆ ಬಿಟ್ಟು ಬಿಡಿ, ಬ್ಲ್ಯಾಕ್ ಮೇಲ್ ಮಾಡಬಹುದು ಎಂದು ಭಾವಿಸಿದ್ದರೆ ಅದು ಭ್ರಮೆ. ಯಾರಾದರೂ ಪಕ್ಷ ಬಿಟ್ಟು ಹೋಗುವವರಿದ್ದರೆ ಗೌರವಯುತವಾಗಿ ಕಳಿಸಿಕೊಡೋಣ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದಲ್ಲಿ ಇರುವುದು ಸೌಭಾಗ್ಯ. ಹಿಂದೆ ಆಗಿದ್ದನ್ನೆಲ್ಲ ಮರೆತುಬಿಡಿ. ಸ್ಟೇಜ್ ಮೇಲೆ ಜಾಗ ಹುಡುಕುತ್ತಾರೆ, ಆದರೆ ಒಬ್ಬರನ್ನೂ ಕರೆದುಕೊಂಡು ಬರುವುದಿಲ್ಲ. ಚಾಡಿ ಹೇಳುವುದು ಬಿಡಿ, ನಾನಂತೂ ಯಾವ ಚಾಡಿಯನ್ನೂ ಕೇಳುವುದಿಲ್ಲ. ಎಲ್ಲ ಕಡೆ ಭಿನ್ನಾಭಿಪ್ರಾಯಗಳು ಇರುತ್ತವೆ, ಅದೆಲ್ಲವೂ ಮನೆಯ ವಾತಾವರಣದಲ್ಲಿರಬೇಕು ಎಂದು ಭಿನ್ನಮತ ಸೃಷ್ಟಿಸುವ ಎಲ್ಲ ನಾಯಕರಿಗೆ ಡಿಕೆಶಿ ಚಾಟಿ ಬೀಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss