Monday, July 4, 2022

Latest Posts

ಮೊದಲ ಹಂತದ ಗ್ರಾ.ಪಂ.ಚುನಾವಣೆ: ಹಾವೇರಿ ಜಿಲ್ಲೆಯಲ್ಲಿ ನಡೆಯಿತು ಶಾಂತಿಯುತ ಮತದಾನ

ಹೊಸ ದಿಗಂತ ವರದಿ, ಹಾವೇರಿ:

ಜಿಲ್ಲೆಯ 104 ಗ್ರಾಮ ಪಂಚಾಯತ್‌ಗಳಿಗೆ ಮಂಗಳವಾರ ಜರುಗಿದ ಮೊದಲ ಹಂತದ ಚುನಾವಣೆಯಲ್ಲಿ ಶಾಂತಿಯುತ ಮತದಾನವಾಗಿದೆ.
ಮೊದಲ ಹಂತದಲ್ಲಿ ಜಿಲ್ಲೆಯ ಹಾವೇರಿ, ರಾಣೇಬೆನ್ನೂರು, ಹಿರೇಕೆರೂರ ಹಾಗೂ ರಟ್ಟಿಹಳ್ಳಿ ತಾಲೂಕಿನ 104 ಗ್ರಾಮ ಪಂಚಾಯತಿಗಳ 709 ಮತಗಟ್ಟೆಗಳಲ್ಲಿ 34 ಮತಗಟ್ಟೆಗಳಲ್ಲಿ ಅವಿರೋಧ ಆಯ್ಕೆ ಆದ ಕಾರಣ 675 ಮತಗಟ್ಟೆಗಳಲ್ಲಿ ಮಂಗಳವಾರ ಮತದಾನ ಜರುಗಿತು.
ಬೆಳಿಗ್ಗೆ ಕೊರೆಯುವ ಚಳಿಯಿದ್ದ ಕಾರಣಕ್ಕೆ ಮಂದಗತಿಯಲ್ಲಿ ಆರಂಭಗೊಂಡ ಮತದಾನ ಬೆಳಗಿನ 9 ರ ನಂತರ ಎಳೆಬಿಸಿಲಿಗೆ ಚುರುಕುಗೊಂಡಿತು.
ಹಾವೇರಿ ತಾಲೂಕಿನ ಅಗಡಿ, ಕರ್ಜಗಿ ಹಾಗೂ ದೇವಗಿರಿ ಗ್ರಾಮ ಪಂಚಾಯತಿ ಮತಗಟ್ಟೆಗಳಲ್ಲಿ ಬೆಳಗಿನಿಂದಲೇ ಸರತಿ ಸಾಲುಗಳು ಕಂಡುಬಂದವು. ಚಳಿಯಲ್ಲಿ ಮುದಡಿದ ಮಹಿಳೆಯರು ಮತಗಟ್ಟೆಯ ಕೊಠಡಿ ಮುಂಭಾಗದಲ್ಲಿ ಚಳಿಗೆ ಮೈವೊಡ್ಡಿ ಕುಳಿತು ಹರಟುತ್ತಿರುವ ದೃಶ್ಯ ಅಲ್ಲಿಲ್ಲಿ ಕಂಡುಬಂದಿತು.
ಮನೆಯಲ್ಲಿರುವ ವಿಕಲಚೇತನರು, ವಯೋವೃದ್ಧರನ್ನು ಮತಗಟ್ಟೆಗೆ ಕರೆತರುವ ದೃಶ್ಯ ಎಲ್ಲೆಡೆ ಕಂಡುಬಂದಿತು. ಗ್ರಾಮಗಳ ವೃತ್ತದಲ್ಲಿ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳ ಓಡಾಟ, ಬೆಂಬಲಿಗರು ಮತದಾರರಿಗೆ ಮಾರ್ಗದರ್ಶನ ಮಾಡುತ್ತಿರುವುದು ಕಂಡುಬಂದಿತು.
ಗುರುತಿನ ಚೀಟಿ ಹಿಡಿದ ಮತದಾರರು ಗುಂಪುಗುಂಪಾಗಿ ಮತದಾನದಲ್ಲಿ ಪಾಲ್ಗೊಳ್ಳಲು ಸಾಗುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಮೊದಲ ಸಲ ಮತದಾನ ಮಾಡಲು ಯುವತಿಯೋರ್ವಳು ಸಹೋದರನೊಂದಿಗೆ ಮತಗಟ್ಟೆಗೆ ಹೆಜ್ಜೆ ಹಾಕುತ್ತಿದ್ದರೆ ದೇವಗಿರಿ ಮತಗಟ್ಟೆಯೊಂದರಲ್ಲಿ ೧೦೫ ವರ್ಷದ ವಯೋಮಾನದ ಹನುಮಮ್ಮ ಗೌರಮ್ಮನವರನ್ನು ಮತಚಲಾಯಿಸಲು ಮೊಮ್ಮಗನೊಬ್ಬ ಅಜ್ಜಿಯನ್ನು ಹೆಗಲ ಮೇಲೆ ಹೊತ್ತು ತರುವ ದೃಶ್ಯ ಎಲ್ಲರ ಗಮನ ಸೆಳೆಯಿತು.
ಅಲ್ಲಲ್ಲಿ ಹಿರಿಯರನ್ನು ಹೊತ್ತು ತರುವ, ವಾಹನದಲ್ಲಿ ಕರೆತರುವ ದೃಶ್ಯಗಳು ಕಂಡುಬಂದವು. ವಿಕಲಚೇತನರು, ಅಶಕ್ತರಿಗಾಗಿ ಮತಗಟ್ಟೆಯಲ್ಲಿ ತ್ರಿಚಕ್ರವಾಹನಗಳ ವ್ಯವಸ್ಥೆ ಮಾಡಲಾಗಿತ್ತು. ಕೋವಿಡ್ ಹಿನ್ನೆಲೆಯಲ್ಲಿ ಕೆಲ ಬೂತ್‌ನ ಮುಂಭಾಗದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಚೌಕಾಕಾರದ ಮಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು.
ಹಾವೇರಿ ತಾಲೂಕಿನ 33 ಗ್ರಾ.ಪಂಗಳ 172 ಕ್ಷೇತ್ರದ 504 ಸ್ಥಾನಗಳ ಪೈಕಿ 49 ಜನರು ಅವಿರೋಧ ಆಯ್ಕೆಯಾದ ಕಾರಣ 455 ಸದಸ್ಯರ ಆಯ್ಕೆಗೆಗೆ ಚುನಾವಣೆ ಜರುಗಿತು. ರಾಣೇಬೆನ್ನೂರು 33 ಗಾಮ್ರ ಪಂಚಾಯತಿಯ 182 ಕ್ಷೇತ್ರದ 491 ಸ್ಥಾನಗಳ ಪೈಕಿ 33 ಜನರು ಅವಿರೋಧ ಆಯ್ಕೆಯಾಗಿದ್ದು,458 ಸದಸ್ಯರ ಆಯ್ಕೆಗೆ ಚುನಾವಣೆ ಜರುಗಿತು. ಹಿರೇಕೆರೂರು 19 ಗ್ರಾಮ ಪಂಚಾಯತಿಯ 94 ಕ್ಷೇತ್ರಗಳ 250 ಸ್ಥಾನಗಳ ಪೈಕಿ 32 ಜನರು ಅವಿರೋಧ ಆಯ್ಕೆಯಾಗಿದ್ದು, 228 ಸದಸ್ಯರ ಆಯ್ಕೆಗೆ ಜರುಗಿತು. ರಟ್ಟಿಹಳ್ಳಿ 19 ಗ್ರಾಮ ಪಂಚಾಯತಿಯ 91 ಕ್ಷೇತ್ರಗಳ 251 ಸ್ಥಾನಗಳ ಪೈಕಿ 35 ಸದಸ್ಯರು ಅವಿರೋಧ ಆಯ್ಕೆ ಕಾರಣ 216 ಸದಸ್ಯರ ಚುನಾಯಿಸಲು ಮತದಾನ ಜರುಗಿತು.
ಹಾವೇರಿಯ 220 ಮತಗಟ್ಟೆ, ರಾಣೇಬೆನ್ನೂರಿನ 229, ಹಿರೇಕೆರೂರು ಹಾಗೂ ರಟ್ಟಿಹಳ್ಳಿಯ ತಲಾ 113 ಮತಗಟ್ಟೆಗಳು ಸೇರಿದಂತೆ 675 ಮತಗಟ್ಟೆಗಳಲ್ಲಿ ಇಂದು ಶಾಂತಿಯುತ ಮತದಾನ ನಡೆಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss