Friday, March 5, 2021

Latest Posts

ಮೊಮ್ಮಗಳ ಓದಿಗಾಗಿ ಮನೆಯನ್ನೇ ಮಾರಿ ತನ್ನ ಆಟೋದಲ್ಲೇ ಜೀವನ ನಡೆಸುತ್ತಿರುವ ವೃದ್ಧ!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಜಾಲತಾಣ ‘ಹ್ಯೂಮನ್ಸ್ ಆಫ್ ಬಾಂಬೆ ‘ ಮುಂಬೈ ಮಹಾನಗರದ ಆಟೋರಿಕ್ಷಾ ಚಾಲಕರೋರ್ವರ ಹೃದಯ ಕಲಕುವ ಕಥನವನ್ನು
ಶೇರ್ ಮಾಡಿಕೊಂಡ ಬಳಿಕ ಅವರಿಗೆ ನೆರವಿನ ಮಹಾಪೂರವೇ ಹರಿದುಬರುತ್ತಿದೆ. ‘ಹ್ಯೂಮನ್ಸ್ ಆಫ್ ಬಾಂಬೆ ‘ಗೆ ನೀಡಿದ ಸಂದರ್ಶನದಲ್ಲಿ ದೇಶರಾಜ್ ತನ್ನ ಇಬ್ಬರು ಪುತ್ರರನ್ನು ಕಳೆದುಕೊಂಡ ಬಳಿಕ ಮೊಮ್ಮಕ್ಕಳು ಮತ್ತು ಸೊಸೆಯಂದಿರನ್ನು ಸಾಕುವ ಜವಾಬ್ದಾರಿ ತನಗೆ ಬದುಕಿನಲ್ಲಿ ಮುಂದೆ ಸಾಗಲು ಬಲ ನೀಡಿದೆ ಎಂದು ಹೇಳುವ ಮೂಲಕ ಈ ಮುದಿ ಪ್ರಾಯದಲ್ಲೂ ದುಡಿಯಬೇಕಾದ ಅನಿವಾರ್ಯತೆಯನ್ನು ಬಹಿರಂಗಗೊಳಿಸಿದ್ದಾರೆ.
ದೇಸರಾಜ್​ಗೆ ಇಬ್ಬರು ಗಂಡು ಮಕ್ಕಳಿದ್ದು, ಅವರಿಬ್ಬರು ಕೆಲ ವರ್ಷಗಳ ಹಿಂದೆ ತೀರಿಕೊಂಡಿದ್ದಾರೆ. ಅದಾದ ನಂತರ ಪೂರ್ತಿ ಕುಟುಂಬದ ಜವಾಬ್ದಾರಿ ದೇಸರಾಜ್​ ಹೆಗಲಿಗೆ ಬಿದ್ದಿದ್ದು , ಅವರು ಆಟೋರಿಕ್ಷಾ ಓಡಿಸಿಕೊಂಡು ಜೀವನ ನಡೆಸಿದ್ದಾರೆ. ಆಗ ಒಂಭತ್ತನೇ ತರಗತಿಯಲ್ಲಿ ಓದುತ್ತಿದ್ದ ಮೊಮ್ಮಗಳು ತಾನು ಶಾಲೆಯನ್ನು ಬಿಡಬೇಕೇ ಎಂದು ಪ್ರಶ್ನಿಸಿದಾಗ, ಆಕೆ ಬಯಸಿದಷ್ಟು ಓದಬಹುದು ಎಂದು ತಾತ ಭರವಸೆ ನೀಡಿದ್ದರು.
ಈ ಮಧ್ಯೆ 2019ರಲ್ಲಿ ಅವರ ಮೊಮ್ಮಗಳು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ. 80 ಅಂಕ ಗಳಿಸಿ ಬಂದು ಸಂತೋಷದಿಂದ ವಿಷಯ ಹಂಚಿಕೊಂಡಳಂತೆ. ಅಲ್ಲದೆ  ಬಿಎಡ್​ ಮಾಡಬೇಕೆಂದು ಆಸೆ ಹೇಳಿಕೊಂಡಿದ್ದಾಳೆ. ಮಹಾರಾಷ್ಟ್ರದಿಂದ ದೆಹಲಿಗೆ ತೆರಳಿ ಅಲ್ಲಿಯೇ ವಿದ್ಯಾಭ್ಯಾಸ ಮುಂದುವರಿಸುವುದಾಗಿ ಹೇಳಿದ್ದಾಳೆ. ಮೊದಲೇ ಆರ್ಥಿಕ ಸಂಕಷ್ಟದಲ್ಲಿದ್ದ ದೇಸರಾಜ್​ಗೆ ಮೊಮ್ಮಗಳ ಆಸೆ ಕೇಳಿ ಏನು ಮಾಡಬೇಕೆಂದು ತಿಳಿಯಲಿಲ್ಲವಂತೆ. ಹೆಂಡತಿ ಮತ್ತು ಸೊಸೆಯನ್ನು ಊರಿನ ಮನೆಗೆ ಕಳುಹಿಸಿಕೊಟ್ಟು, ನಗರದಲ್ಲಿ ವಾಸವಿದ್ದ ಮನೆಯನ್ನು ಮಾರಾಟ ಮಾಡಿ ವಿದ್ಯಾಭ್ಯಾಸಕ್ಕೆ ಹಣ ಒದಗಿಸಿದರಂತೆ. ಅದಾದ ಮೇಲೆ ತಮಗೆ ಇರಲು ಸೂರಿರದ ಹಿನ್ನೆಲೆಯಲ್ಲಿ ಆಟೋವನ್ನೇ ತನ್ನ ಮನೆಯಾಗಿ ಮಾಡಿಕೊಂಡಿದ್ದಾರೆ. ಹಗಲು ಹೊತ್ತಿನಲ್ಲಿ ಆಟೋ ಬಾಡಿಗೆ ಮಾಡಿ ರಾತ್ರಿ ಹೊತ್ತಲ್ಲಿ ಅದರಲ್ಲೇ ಮಲಗಿ ಜೀವನ ಕಳೆಯುತ್ತಿದ್ದಾರೆ.
ವೃದ್ಧನ ನೋವಿನ ಕಥೆ ಸಾಮಾಜಿಕ ಮಾಧ್ಯಮಗಳಲ್ಲಿ ಹಲವರ ಹೃದಯಗಳನ್ನು ಕಲಕಿದೆ. ಅವರಿಗೆ ಆರ್ಥಿಕ ನೆರವು ನೀಡಲು ಬಹಳಷ್ಟು ಜನರು ಮುಂದೆ ಬಂದಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss