ವಿಧಾನಸಭೆ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಲಘುವಾಗಿ ಮಾತನಾಡಿದ ಮಾಜಿ ಸಚಿವ ಯು.ಟಿ. ಖಾದರ್ ವಿರುದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗರಂ ಆದ ಪ್ರಸಂಗ ನಡೆಯಿತು.
ಪಿಎಫ್ಐ, ಎಸ್ಡಿಪಿಐ ಪರ ನಿಲ್ಲುವುದಾದರೆ ಪಾಕಿಸ್ತಾನಕ್ಕೆ ಹೋಗಿ ಎಂದಿದ್ದ ಸಚಿವ ಸಿ.ಟಿ. ರವಿ ಹೇಳಿಕೆಗೆ ತಿರುಗೇಟು ನೀಡಲು ಮುಂದಾದ ಖಾದರ್, ಪಾಕಿಸ್ತಾನದಲ್ಲಿ ನನಗ್ಯಾರೂ ನೆಂಟರಿಲ್ಲ. ನನಗೂ ಪಾಕಿಸ್ತಾನ ಯಾವ ಸಂಬಂಧವಿಲ್ಲ. ಪಾಕಿಸ್ತಾನಕ್ಕೆ ಹೋಗಿ ಬಿರಿಯಾನಿ ತಿಂದ ಬಂದ ಪ್ರಧಾನಿ ಎಂದರೆ, ಅದು ನರೇಂದ್ರ ಮೋದಿ ಎಂದುಬಿಟ್ಟರು.
ಇದರಿಂದ ಆಡಳಿತಾರೂಢ ಬಿಜೆಪಿ ಸದಸ್ಯರು ಕೆಂಡಾಮಂಡಲರಾದರಲ್ಲದೆ, ಖಾದರ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ನಡುವೆ ವಾಕ್ಸಮರ ನಡೆಯಿತು. ಮಾತಿನ ಮಧ್ಯೆ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರು ಖಾದರ್ರನ್ನು ದೇಶದ್ರೋಹಿ ಎಂದರು. ಇದರಿಂದ ವಾಕ್ಸಮರ ತಾರಕಕ್ಕೇರಿತು.
ಮಧ್ಯಪ್ರವೇಶಿಸಿದ ಸಿಎಂ, ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ದೇಶಕ್ಕೆ ಪ್ರಧಾನಿ ಎಂಬುದು ನೆನಪಿರಲಿ. ಅವರು ಪಾಕಿಸ್ತಾನಕ್ಕೆ ಹೋಗಿ ಬಂದರು ಎಂದಿದ್ದರೆ, ಆಕ್ಷೇಪವಿರಲಿಲ್ಲ. ಬಿರಿಯಾನಿ ತಿನ್ನಲೆಂದೇ ಹೋದರು ಎಂಬರ್ಥದಲ್ಲಿ ಹೇಳಿದ್ದು ತಪ್ಪು. ಖಾದರ್ ಕ್ಷಮೆ ಕೇಳಬೇಕು. ದೇರ್ ಈಸ್ ಲಿಮಿಟ್ ಫಾರ್ ಎವೆರಿಥಿಂಗ್. ಇದನ್ನೆಲ್ಲಾ ಸಹಿಸಬೇಕಾ ಎಂದು ಗುಡುಗಿದರು. ಇಡೀ ಸದನ ನಿಶ್ಶಬ್ಧವಾಯಿತು.
ಸಾಕಷ್ಟು ವಾದ-ವಿವಾದಗಳ ನಂತರ ಖಾದರ್ ಅವರು ತಾವು ಬಳಸಿದ ಶಬ್ದಕ್ಕೆ ಸಂಬಂಸಿದಂತೆ ವಿಷಾದ ವ್ಯಕ್ತಪಡಿಸಿದರು. ಕಡತದಿಂದ ತೆಗೆಯಲೂ ನನ್ನ ಆಕ್ಷೇಪವಿಲ್ಲ. ರೇಣುಕಾಚಾರ್ಯ ಕ್ಷಮೆ ಕೇಳದಿದ್ದರೂ ಕ್ಷಮಿಸುತ್ತೇನೆ ಎಂದರು.
ಕೊನೆಯಲ್ಲಿ ಸದಸ್ಯರ ಮಾತು, ನಡವಳಿಕೆ ಕುರಿತು ಬುದ್ಧಿವಾದ ಹೇಳಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಖಾದರ್ ಮತ್ತು ರೇಣುಕಾಚಾರ್ಯ ಬಳಸಿದ ಶಬ್ದಗಳನ್ನು ಕಡತದಿಂದ ತೆಗೆಯಲು ಸೂಚಿಸಿದರು.