ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಡಿ ಭಾರತ ಅತ್ಯಂತ ದಿಟ್ಟತನದಿಂದ ಮುನ್ನಡೆಯುತ್ತಿದ್ದು, ದೇಶದ ಭದ್ರತೆ ಹಾಗೂ ಘನತೆ ಸಂಪೂರ್ಣವಾಗಿ ಕಾಯ್ದುಕೊಳ್ಳಲಾಗುತ್ತಿದೆ. ಸತ್ಯಾಂಶ ಹೀಗಿರುವಾಗ ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ನಿಂದ ಯಾವುದೇ ಪ್ರಮಾಣಪತ್ರದ ಅಗತ್ಯವಿಲ್ಲ ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿಯವರು ಬುಧವಾರ ಹೇಳಿದ್ದಾರೆ.
ಕಾಂಗ್ರೆಸ್ನ ವಂಶವಾದಿ ಕುಟುಂಬ ಇತಿಹಾಸ ಹಾಗೂ ಭೂಗೋಳಶಾಸ್ತ್ರದ ಬಗ್ಗೆ ಅರ್ಥಮಾಡಿಕೊಳ್ಳದೆಯೇ ಬೇಜವಾಬ್ದಾರಿತನದ ಹೇಳಿಕೆಗಳನ್ನು ನೀಡುತ್ತಿದೆ.ವಾಸ್ತವವೆಂದರೆ ಪಕ್ಷದ ನಾಯಕರು ನೀಡುತ್ತಿರುವ ಹೇಳಿಕೆಗಳನ್ನು ಕಾಂಗ್ರೆಸ್ ನಲ್ಲಿರುವ ಅನೇಕರಿಗೇ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದಾಗಿ ನಖ್ವಿ ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ದೇಶದ ಸುರಕ್ಷತೆಯಂತಹ ವಿಷಯದಲ್ಲೂ ಕಾಂಗ್ರೆಸ್ ನಾಯಕತ್ವ ವರ್ತಿಸುವ ರೀತಿ ಅಚ್ಚರಿ ಮೂಡಿಸುತ್ತಿದೆ.ಅವರ ಮಾನಸಿಕತೆ ಉತ್ತಮವಿರುವಂತೆ ತೋರುತ್ತಿಲ್ಲ. ನಮ್ಮ ಕೊರೋನಾ ವಾರಿಯರ್ಸ್ ಹಾಗೂ ಯೋಧರನ್ನೇ ಅವಮಾನಿಸಲು ಮುಂದಾಗಿದ್ದು ನಗೆಪಾಟಲಿಗೀಡಾಗುತ್ತಿದ್ದಾರೆ.ಕಾಂಗ್ರೆಸ್ ಒಂದನ್ನು ಅದರಲ್ಲೂ ಕಾಂಗ್ರೆಸ್ನ ವಂಶವಾದಿ ಕುಟುಂಬವೊಂದನ್ನು ಹೊರತುಪಡಿಸಿ ಇತರ ಅನೇಕ ಪ್ರತಿಪಕ್ಷಗಳು ದೇಶವೀಗ ಒಂದಾಗಿ ನಿಲ್ಲಬೇಕು.ಸರಕಾರಕ್ಕೆ ತಮ್ಮ ಪೂರ್ಣ ಬೆಂಬಲವಿದೆ ಎಂದು ಘೋಷಿಸುತ್ತಿವೆ.ಹೀಗಿರುವಾಗ ಕಾಂಗ್ರೆಸ್ನಿಂದ ಕೇಂದ್ರ ಸರಕಾರಕ್ಕೆ ಯಾವುದೇ ಪ್ರಮಾಣಪತ್ರದ ಅಗತ್ಯವಿಲ್ಲ ಎಂಬುದಾಗಿ ನಖ್ವಿ ಕುಟುಕಿದರು.
ಕಾಂಗ್ರೆಸ್ ಎಂದರೆ ಈಗ ಪ್ರತಿಪಕ್ಷವಾಗಿ ಉಳಿದಿಲ್ಲ. ಬದಲಿಗೆ ಅದೀಗ ಕೇವಲ ಒಂದು ಫೋಟೋ ಫ್ರೇಮ್ನಲ್ಲಿರುವ ಕುಟುಂಬ. ಊಳಿಗಮಾನ್ಯದ ಸಂಕೇತವಾಗಿ ಕುಟುಂಬದ ಸದಸ್ಯರು ತಮ್ಮದೇ ಆದ ವಿರೋಧ ಹಾಗೂ ದನಿಯನ್ನು ಹೊಂದಿದ್ದಾರೆ. ಇದು ಹೇಗಿದೆ ಎಂದರೆ ಇಂದಿರಾ ಎಂದರೆ ಭಾರತ, ಭಾರತ ಎಂದರೆ ಇಂದಿರಾ ಎಂದ ಹಾಗೆ.ಕಾಂಗ್ರೆಸ್ ನಾಯಕತ್ವ ಕೂಡಾ ಕಾಂಗ್ರೆಸ್ ಎಂದರೆ ಪ್ರತಿಪಕ್ಷ , ಪ್ರತಿಪಕ್ಷ ಎಂದರೆ ಕಾಂಗ್ರೆಸ್ ಎಂಬಂತೆ ವರ್ತಿಸುತ್ತಿದೆ. ಆದರೆ ವಾಸ್ತವ ಹಾಗಿಲ್ಲ ಎಂಬುದನ್ನು ಅದು ಮರೆತಿದೆ ಎಂದು ಮುಖ್ತಾರ್ ಅಬ್ಬಾಸ್ ನಖ್ವಿ ವ್ಯಂಗ್ಯವಾಡಿದರು.