Wednesday, June 29, 2022

Latest Posts

ಮೋದಿ ಸರಕಾರದ ಪಿಎಲ್‌ಐ ಸ್ಕೀಮ್‌ನಡಿ ಹೊಸ ಮೊಬೈಲ್ ಉತ್ಪಾದನಾ ಘಟಕ ಸ್ಥಾಪಿಸಲು ಟಾಟಾ ಸನ್ಸ್ ಹೂಡಿಕೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಭಾರತವನ್ನು ವಿಶ್ವದ ಮೊಬೈಲ್ ಫೋನ್ ಉತ್ಪಾದನಾ ಹಬ್ ಆಗಿಸುವ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಪಿಎಲ್‌ಐ ಸ್ಕೀಮ್‌ನಡಿ ಟಾಟಾ ಸನ್ಸ್ ತಮಿಳ್ನಾಡಿನಲ್ಲಿ ೧.೫ ಬಿ.ಡಾ.ಹೂಡಿಕೆಯೊಂದಿಗೆ ಆಪಲ್‌ನೊಡಗೂಡಿ ಹೊಸ ಮೊಬೈಲ್ ಫೋನ್ ಉತ್ಪಾದನಾ ಘಟಕವೊಂದನ್ನು ಸ್ಥಾಪಿಸಲಿದೆ. ಇದು ಬೃಹತ್ ಪ್ರಮಾಣದ ಉದ್ಯೋಗಗಳನ್ನೂ ಸೃಷ್ಟಿಸಲಿದೆ.
ತಮಿಳ್ನಾಡಿನ ಹೊಸೂರಿನ ಕೈಗಾರಿಕಾ ನೆಲೆಯಲ್ಲಿ ಈ ಘಟಕ ಸ್ಥಾಪನೆಯಾಗಲಿದ್ದು, ಇಲ್ಲಿ ಮೊಬೈಲ್ ಫೋನ್ ಮತ್ತು ಅದರ ಬಿಡಿಭಾಗಗಳ ಉತ್ಪಾದನಾ ಸ್ಥಾವರಕ್ಕೆ ಟಾಟಾ ಸನ್ಸ್ ಮುಂದಾಗಲಿದೆ ಎಂಬುದಾಗಿ ಟಾಟಾ ಸನ್ಸ್ ಅಧ್ಯಕ್ಷ ಎನ್.ಚಂದ್ರಶೇಖರನ್ ಪ್ರಕಟಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ‘ಮೇಕ್ ಇನ್ ಇಂಡಿಯಾ’ ಪರಿಕಲ್ಪನೆಯಡಿ ಈ ಬೃಹತ್ ಉದ್ಯಮ ಸ್ಥಾಪನೆಯಾಗಲಿದೆ.
ಭಾರತವನ್ನು ವಿಶ್ವದ ಎಲೆಕ್ಟ್ರಾನಿಕ್ಸ್ ಮ್ಯಾನ್ಯುಫ್ಯಾಕ್ಚರಿಂಗ್ ಪವರ್‌ಹೌಸ್ ಆಗಿಸುವ ಮಹತ್ವಾಕಾಂಕ್ಷಿ ಗುರಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ ಸರಕಾರ ಇತ್ತೀಚೆಗೆ ಅನಾವರಣಗೊಳಿಸಿದ ಪಿಎಲ್‌ಐ(ಪ್ರೊಡಕ್ಟಿವಿಟಿ-ಲಿಂಕ್ಡ್ ಇನ್ಸೆಂಟಿವ್)ಸ್ಕೀಮ್‌ನಡಿ ಟಾಟಾ ಸನ್ಸ್ ಈ ಬೃಹತ್ ಉದ್ಯಮ ಸ್ಥಾಪಿಸುತ್ತಿದೆ. ಈ ಟಾಟಾ ಇಲೆಕ್ಟ್ರಾನಿಕ್ಸ್ ಕಂಪೆನಿ ಸ್ಥಾಪನೆಗೆ ತಮಿಳ್ನಾಡಿನ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಕಾರ್ಪೊರೇಶನ್ ಟಿಡ್ಕೋ ೫೦೦ಎಕರೆಗಳನ್ನು ಒದಗಿಸಿದೆ.
ಶೇ.೯೦ರಷ್ಟು ಹೆಣ್ಣುಮಕ್ಕಳಿಗೆ ಉದ್ಯೋಗ!
ಚೀನಾ ತೊರೆದು ಬರುತ್ತಿರುವ ವಿಶ್ವದ ಬೃಹತ್ ಮೊಬೈಲ್ ಫೋನ್ ಕಂಪೆನಿ ಆಪಲ್ ಕಂಪೆನಿಗೆ ಈ ಮೂಲಕ ಭಾರತ ಅವಕಾಶ ಕಲ್ಪಿಸುತ್ತಿದೆ.ಈ ಕಂಪೆನಿಯು ೨೦೨೧ರ ಅಕ್ಟೋಬರ್‌ನೊಳಗೆ ಕಾರ್ಯಾರಂಭ ಮಾಡಲಿದ್ದು, ೧೮೦೦೦ಕ್ಕೂ ಅಧಿಕ ಮಂದಿಗೆ ಇಲ್ಲಿ ನೇರ ಉದ್ಯೋಗ ಲಭಿಸಲಿದೆ. ಅದರಲ್ಲೂ ಈ ಉದ್ಯೋಗಿಗಳ ಪೈಕಿ ಶೇ.೯೦ರಷ್ಟು ಮಂದಿ ಹೆಣ್ಣುಮಕ್ಕಳೇ ಆಗಿರಲಿರುವುದು ಅತ್ಯಂತ ಗಮನ ಸೆಳೆಯುವ ಅಂಶವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss