ಉಡುಪಿ: ಪ್ರಧಾನಿ ಮೋದಿ ಅವರ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಣೆ ದೇಶದ ಅಭಿವೃದ್ಧಿಯಲ್ಲಿ ಹೊಸ ಭಾಷ್ಯವನ್ನು ಬರೆಯಲಿದೆ. ಹಣಕಾಸಿನ ತೊಂದರೆಯಿಂದ ಬಳಲುತ್ತಿದ್ದ ಉದ್ದಿಮೆಗಳಿಗೆ ಆಕ್ಸಿಜನ್ ನೀಡಿದಂತಾಗಿದೆ. ಅಲ್ಲದೇ ಸ್ವ-ಅವಲಂಬಿತ ಭಾರತದ ಪರಿಕಲ್ಪನೆಗೆ ಈ ಪ್ಯಾಕೇಜ್ ದೊಡ್ಡ ಕೊಡುಗೆ ನೀಡಲಿದೆ ಎಂದು ಬಿಜೆಪಿ ಮಂಗಳೂರು ವಿಭಾಗದ ಪ್ರಭಾರಿ ಕೆ. ಉದಯಕುಮಾರ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ಲೋಕಲ್ ಬ್ರ್ಯಾಂಡ್ ಇನ್ನು ಮುಂದೆ ಜನಮಾನಸದಲ್ಲಿ ಗಟ್ಟಿಯಾಗಬೇಕು. ಇದರಿಂದ ಸ್ಥಳೀಯ ಉದ್ದಿಮೆದಾರರು, ಸಣ್ಣ ಕೈಗಾರಿಕೆಗಳು ಪ್ರಗತಿ ಹೊಂದಲಿವೆ. ಯುವಕರಿಗೆ ಉದ್ಯೋಗ ಅವಕಾಶಗಳು ಜಾಸ್ತಿಯಾಗಲಿದೆ. ಸಣ್ಣ, ಅತಿ ಸಣ್ಣ ಉದ್ದಿಮೆದಾರರಿಗೆ 3ಲಕ್ಷ ಕೋಟಿ ರೂ. ಭದ್ರತೆ ರಹಿತ ಸಾಲ, ಉದ್ದಿಮೆಗಳ ಆರ್ಥಿಕ ಪುನಶ್ಚೇತನಕ್ಕೆ ಕಾರಣವಾಗಲಿದೆ. ವಿದ್ಯುತ್ ಬಿಲ್ನಲ್ಲಿ ರಿಯಾಯಿತಿ ಒದಗಿಸುವ ಕಂಪನಿಗಳಿಗೆ 90,000 ಕೋಟಿ ರೂ. ಸಹಾಯಧನ ನೀಡಿರುವುದು ಉತ್ತಮ ಹೆಜ್ಜೆ.
ಈ ಪ್ಯಾಕೇಜ್ ಕೊರೋನಾ ಸಂಕಷ್ಟದಿಂದ ತೊಂದರೆಗೀಡಾದ ದೇಶವಾಸಿಗಳಿಗೆ ಬೇಸಗೆ ಕಾಲದಲ್ಲಿ ಮಳೆಯ ತಂಪಿನ ಅನುಭವದಂತಾಗಿದೆ ಎಂದು ಉದಯಕುಮಾರ ಶೆಟ್ಟಿ ಹೇಳಿದ್ದಾರೆ.