ಭೋಪಾಲ್: ಮಧ್ಯಪ್ರದೇಶ ರಾಜಕೀಯ ಜಿದ್ದಾಜಿದ್ದಿ ಮತ್ತೊಂದು ತಿರುವು ಪಡೆದಿದ್ದು, ಮುಖ್ಯಮಂತ್ರಿ ಕಮಲ್ನಾಥ್ ಸರ್ಕಾರದ ವಿರುದ್ಧ ಬಂಡಾಯವೆದ್ದಿರುವ ಆರು ಸಚಿವರನ್ನು ಮುಖ್ಯಮಂತ್ರಿ ಸಲಹೆ ಮೇರೆಗೆ ಮಧ್ಯಪ್ರದೇಶ ರಾಜ್ಯಪಾಲ ಲಾಲ್ ಜಿ ತಂಡನ್ ಉಚ್ಚಾಟನೆ ಮಾಡಿದ್ದಾರೆ.
ಕಾಂಗ್ರೆಸ್ನ 13 ಬಂಡಾಯ ಶಾಸಕರೊಂದಿಗೆ ಬೆಂಗಳೂರಿನ ರೆಸಾರ್ಟ್ ಒಂದರಲ್ಲಿ ಈ ಆರು ಸಚಿವರು ಬೀಡು ಬಿಟ್ಟಿದ್ದು, ಬಂಡಾಯ ಶಾಸಕರು ತಮ್ಮ ರಾಜೀನಾಮೆಯನ್ನು ವಿಧಾನಸಭೆ ಸ್ಪೀಕರ್ಗೆ ಕಳುಹಿಸಿದ್ದರು. ಆದರೆ, ರಾಜೀನಾಮೆ ನೀಡಲು ಶಾಸಕರು ಸ್ವತಃ ಅವರೇ ಬಂದು ಕಾರಣ ಹೇಳಬೇಕು ಎಂದು ಕೇಳಲಾಗಿತ್ತು. ಈ ಬೆನ್ನಲ್ಲೇ ರಾಜ್ಯಪಾಲರು 6 ಸಚಿವರನ್ನು ಉಚ್ಚಾಟಿಸಿದ್ದಾರೆ.
ಅಲ್ಲದೆ, ಮರು ಹಂಚಿಕೆಯೂ ಮಾಡಲಾಗಿದ್ದು, ಇಮಾರ್ತಿ ದೇವಿ ಅವರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಯನ್ನು ವಿಜಯಲಕ್ಷ್ಮೀ ಸಾಧೋ ಅವರಿಗೆ ಹಂಚಿಕೆ ಮಾಡಲಾಗಿದೆ. ಜತೆಗೆ ಪ್ರಧುಮಾನ್ ತೋಮರ್ ನಿರ್ವಹಿಸುತ್ತಿದ್ದ ಆಹಾರ ಸರಬರಾಜು ಇಲಾಖೆಯನ್ನು ಗೋವಿಂದ್ ಸಿಂಗ್ ಅವರಿಗೆ ನೀಡಲಾಗಿದೆ.
ಗೋವಿಂದ್ ಸಿಂಗ್ ರಜಪೂತ್ ಅವರ ಸಾರಿಗೆ ಖಾತೆ ಬ್ರಿಜೇಂದ್ರ ಸಿಂಗ್ ರಾಥೋರ್ಗೆ, ಖಜಾಂಚಿ ಸ್ಥಾನವನ್ನು ಜಿತು ಪತ್ವಾರಿಗೆ ನೀಡಲಾಗಿದೆ. ಇನ್ನು ಈ ಹಿಂದೆ ಪ್ರಭುರಾಮ್ ಚೌಧರಿ ನಿರ್ವಹಿಸುತ್ತಿದ್ದ ಶಾಲಾ ಶಿಕ್ಷಣ ಇಲಾಖೆ ಕಮಲೇಶ್ವರ ಪಟೇಲ್ ಅವರಿಗೆ, ಸುಖದೇವ್ ಪಾನ್ಸೆ ಅವರ ಕಾರ್ಮಿಕ ಇಲಾಖೆಯನ್ನು ಮಹೇಂದ್ರ ಸಿಂಗ್ ಸಿಸೋಡಿಯಾ ಅವರು ಮತ್ತು ಆರೋಗ್ಯ ಇಲಾಖೆಯನ್ನು ತುಳಸಿ ಸಿಲಾವತ್ ವಹಿಸಿಕೊಳ್ಳಲಿದ್ದಾರೆ.