ಹಾಸನ: ಸಿಎಂ ಯಡಿಯೂರಪ್ಪ ದ್ವೇಷ ರಾಜಕಾರಣ ಮಾಡುತ್ತಿದ್ದು, ಜಿಲ್ಲೆಯ ಅಭಿವೃದ್ಧಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್.ಡಿ ರೇವಣ್ಣ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾನತಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದು ಒಂದು ವರ್ಷವಾಗಿದೆ. ಸಿಎಂ ಯಡಿಯೂರಪ್ಪ ಜಿಲ್ಲೆಯ ಮೇಲೆ ದ್ವೇಷದ ರಾಜಕಾರಣದಲ್ಲಿ ತೊಡಗಿದ್ದು, ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲಿ ಭಾರೀ ಅನ್ಯಾಯ ಎಸಗಿದ್ದಾರೆ ಎಂದು ದೂರಿದರು.
ಹಾಸನ, ಬೇಲೂರು,ಚಿಕ್ಕಮಗಳೂರು ರೈಲು ಮಾರ್ಗ ಕ್ಕೆ 462 ಮಂಜುರಾತಿ ಆಗಿದ್ದು, ಕೇಂದ್ರ-ರಾಜ್ಯ ಸರ್ಕಾರ ಶೇ.50 ರಷ್ಟು ಸಹಭಾಗಿತ್ವದಲ್ಲಿ 3 ವರ್ಷದಲ್ಲಿ ಮುಗಿಸಲು ಒಪ್ಪಂದ ಆಗಿತ್ತು ಆದರೆ ಈ ಕೆಲಸ ಇನ್ನು ಆರಂಭವಾಗಿಲ್ಲ ಜೊತೆಗೆ
ಹಾಸನದಲ್ಲಿ ತೋಟಗಾರಿಕೆ ವಿವಿ ಮಾಡಲು ಹಿಂದೆ ತೀರ್ಮಾನ ಆಗಿತ್ತು ಆದರೆ ಇದನ್ನು ಬಿಜೆಪಿ ಸರ್ಕಾರ ವಜಾ ಮಾಡಿದೆ ಎಂದರು.
ಜಿಲ್ಲೆಯಲ್ಲಿ 250 ಕೋಟಿ ವೆಚ್ಚದ ಹೊಸ ಜೈಲು ನಿರ್ಮಾಣ ಕಾಮಗಾರಿ ಆರಂಭವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಜಿಲ್ಲೆಯ ಅನೇಕ ನೀರಾವರಿ ಯೋಜನೆಗಳಿಗೆ ತಡೆ ನೀಡಲಾಗಿದ್ದು, ದುರುದ್ದೇಶದಿಂದಲೇ ಹೀಗೆ ಮಾಡಲಾಗುತ್ತಿದೆ ಎಂದ ಅವರು, ಇಂಥ ಭ್ರಷ್ಟ ಸರ್ಕಾರ ನನ್ನ ಜೀವನದಲ್ಲಿ ನೋಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಶ್ವರಪ್ಪ ವಿರುದ್ಧ ವಾಗ್ಧಾಳಿ:
ನಾನು ಮಂತ್ರಿಯಾಗಿದ್ದಾಗ ಈಶ್ವರಪ್ಪ ಹೇಳಿದ ಅನೇಕ ಅಧಿಕಾರಿಗಳನ್ನು ವರ್ಗ ಮಾಡಿದ್ದೇನೆ. ಆಗ ಅವರು ಎಷ್ಟು ಹಣ ಕೊಟ್ಟಿದ್ದರು ಬಹಿರಂಗ ಪಡಿಸಲಿ ಎಂದು ಸಚಿವ ಈಶ್ವರಪ್ಪ ವಿರುದ್ಧ ರೇವಣ್ಣ ಗರಂ ಆದರು.
ಈಶ್ಚರಪ್ಪ ಅವರು ಹಿರಿಯರು ಹೀಗೆಲ್ಲಾ ಮಾತನಾಡಬಾರದು. ಅವರು ವರ್ಗ ಮಾಡಿಸಿಕೊಂಡಿರುವವರ ಲಿಸ್ಟ್ ನನ್ನ ಬಳಿ ಇದೆ. ವಿಧಾನಸಭೆ ಅಧಿವೇಶನ ಕರೆಯಲಿ ಎಲ್ಲವನ್ನೂ ಬಿಚ್ಚಿಡುವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಶ್ವರಪ್ಪನವರ ಆರೋಪ ಕುರಿತಂತೆ ಯಡಿಯೂರಪ್ಪ ಸಮ್ಮುಖದಲ್ಲೇ ದಾಖಲೆ ಇಡುವೆ ಎಂದ ರೇವಣ್ಣ,ನಾನು ವರ್ಗಾವಣೆಗೆ ಲಂಚ ಪಡೆಸಿದ್ದರೆ ಇಂದೇ ರಾಜಕೀಯ ಬಿಟ್ಟು ಹೋಗುವೆ ಎಂದು ಈಶ್ವರಪ್ಪಗೆ ಬಹಿರಂಗ ಸವಾಲು ಹಾಕಿದರು.