ಹೊಸ ದಿಗಂತ ವರದಿ, ಕೋಲಾರ:
ಜಿಲ್ಲೆಯ ಬಹು ನಿರೀಕ್ಷಿತ ಕುಡಿಯುವ ನೀರಿನ ಯೋಜನೆಯಾದ ಯರಗೋಳ್ ಡ್ಯಾಂಗೆ ನೀರು ಬಂದರೆ ಮಾತ್ರ ಉದ್ಘಾಟನೆ ಮಾಡಲು ಸಾಧ್ಯ ಬರಿ ಖಾಲಿ ಡ್ಯಾಂಗೆ ಉದ್ಘಾಟನೆ ಭಾಗ್ಯ ಬೇಕಾಗಿಲ್ಲ ಎಂದು ಶಾಸಕ ಕೆ.ಶ್ರೀನಿವಾಸಗೌಡ ಅಭಿಪ್ರಾಯಪಟ್ಟರು.
ಮಂಗಳವಾರ ಕೋಲಾರ, ಮಾಲೂರು, ಬಂಗಾರಪೇಟೆ ಹಾಗೂ 143 ಹಳ್ಳಿಗಳಿಗೆ ನೀರು ಪೂರೈಸುವ ಯೋಜನೆಯಾದ ಯರಗೋಳ್ ಡ್ಯಾಂಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ ನಂತರ ಅವರು ಮಾಧ್ಯಮವದವರೊಂದಿಗೆ ಮಾತನಾಡುತ್ತಿದ್ದರು.
ಜನವರಿಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮುಖಾಂತರ ಉದ್ಘಾಟನೆ ಮಾಡಲಾಗುವುದು ಎಂದು ಹಿಂದೆ ತಿಳಿಸಲಾಗಿತ್ತು ಜಿಲ್ಲೆಯಲ್ಲಿ ಸರಿಯಾದ ಮಳೆಯಾಗದ ಕಾರಣ ಡ್ಯಾಂಗೆ ನೀರು ಬಂದಿಲ್ಲ ನೀರು ಬಂದ ನಂತರವೇ ಉದ್ವಾಟಿಸುವುದು ಸೂಕ್ತ ಆದ್ದರಿಂದ ಈ ಕುರಿತು ಸರ್ಕಾರ ಮತ್ತು ಸಿಎಂ ಗಮನಕ್ಕೆ ತರುವುದಾಗಿ ತಿಳಿಸಿದರು.
ಯೋಜನೆಯ ಪೂರ್ವ ಪ್ರಮಾಣದ ಕೆಲಸ ಮುಗಿದಿದ್ದು ಇನ್ನೂ ಪಂಪ್ ಮೋಟಾರ್ ಅಳವಡಿಸುವುದು ಅಷ್ಟೆ ಬಾಕಿ ಇದೆ ಕೆಲಸ ಬಹು ವೇಗವಾಗಿ ನಡೆಯುತ್ತಿದೆ ಅಧಿಕಾರಿಗಳು ಟೆಂಡರ್ ಪ್ರಕ್ರಿಯೆ ನಂತರ ಚುರುಕಾಗಿ ಕೆಲಸ ಮಾಡಿದ್ದಾರೆ ಎಂದರು.
ಎತ್ತಿನ ಹೊಳೆ ಯೋಜನೆಯಲ್ಲಿ ಮಾರ್ಕಂಡಯ್ಯ ಕೆರೆಗೆ ನೀರು ಬರುತ್ತದೆ ಅ ಕೆರೆ ತುಂಬಿದ ನಂತರ ಈ ಡ್ಯಾಂಗೆ ನೀರು ಬರುವುದರಿಂದ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ತಿಳಿಸಿದರು.
ಪ್ರಶ್ನೆಯೊಂದಕ್ಕೆ ಜೆ.ಡಿ.ಎಸ್. ಪಕ್ಷವು ಬಿಜೆಪಿಯೊಂದಿಗೆ ಸೇರ್ಪಡೆಯಾಗುವುದಿಲ್ಲ. ಎನ್.ಡಿ.ಎ.ಗೆ ಮೊದಲಿನಿಂದಲೂ ಬೆಂಬಲಿಸುತ್ತಿದ್ದು ಈಗಲು ಬೆಂಬಲಿಸಲು ನಿರ್ದರಿಸಿದೆ. ಅದರೆ ಇದಕ್ಕೆ ಬಣ್ಣ ಕಟ್ಟಿ ಸುದ್ದಿಗಳನ್ನು ಹರಿಯ ಬಿಡಲಾಗುತ್ತಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಯರಗೋಳ್ ಯೋಜನೆಯನ್ನು ಗುದ್ದಲಿ ಪೂಜೆ ಮಾಡಿದ್ದರು ಬಹಳಷ್ಟು ವರ್ಷಗಳ ಕಾಲ ಯೋಜನೆ ನೆನಗುಂದಿಗೆ ಬಿದ್ದಿತ್ತು ಜನಪ್ರತಿನಿಧಿಗಳ ಒತ್ತಡದಿಂದ ಯೋಜನೆ ಅಂತಿಮ ಹಂತಕ್ಕೆ ತಲುಪಿದೆ ಆದರೆ ನೀರು ಇಲ್ಲವಾಗಿದ್ದು ಮಳೆ ನೀರು ಆಶ್ರಯವಾಗಿರುವ ಡ್ಯಾಂಗೆ ಮುಂದಿನ ದಿನಗಳಲ್ಲಿ ಮಳೆ ಬಂದರೆ ಮಾತ್ರ ನೀರು ಕೊಡಲು ಸಾಧ್ಯವಿದೆ ಎಂದರು.
ಜಿಲ್ಲೆಯ ಮೂರು ಪಟ್ಟಣಗಳು ಸೇರಿದಂತೆ ಕೆಲವು ಹಳ್ಳಿಗಳಿಗೆ ನೀರು ಕೊಡಲು ಮೂರು ಬೃಹತ್ ಟ್ರಾಂಕ್ಗಳನ್ನು ಪೂರ್ಣಗೊಳಿಸಲಾಗುವುದು ಯೋಜನೆಯ ಸಂಬಂಧಿಸಿದಂತೆ ಆನೇಕ ಕಡೆಗಳಲ್ಲಿ ಸಣ್ಣಪುಟ್ಟ ಕೆಲಸಗಳ ನಡೆಯುತ್ತಿದ್ದು ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳ್ಳುತ್ತದೆ ನೀರು ಬಂದ ತಕ್ಷಣವೇ ಉದ್ಘಾಟನೆ ನಡೆಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಮಸ್ವಾಮಿ, ಪರಿಸರ ಪ್ರೇಮಿ ತ್ಯಾಗರಾಜ್, ನಗರಸಭೆ ಸದಸ್ಯ ಸಿ.ರಾಕೇಶ್, ಕಾರ್ಯಪಾಲಕ ಅಭಯಂತರರಾದ ಶ್ರೀನಿವಾಸರೆಡ್ಡಿ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶಿವಪ್ರಕಾಶ್ ನಾಯಕ್ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.