ಯಾದಗಿರಿ : ಕೋವಿಡ್-19 ಬಗ್ಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆಚರಿಸುತ್ತಿರುವ ಮಾಸ್ಕ್ ದಿನಾಚರಣೆಯು ಬದಲಾದ ಕಾಲಮಾನದ ಮತ್ತು ಅವಶ್ಯಕತೆಯ ಸಂಕೇತವಾಗಿದೆ. ಜನರಲ್ಲಿ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಕೊರೊನಾ ತಡೆಯೋಣ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ಕರೆ ನೀಡಿದರು.
ಯಾದಗಿರಿ ತಾಲ್ಲೂಕಿನ ಮುಂಡರಗಿ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ಕೋವಿಡ್-19 ಮುಂಜಾಗ್ರತಾ ಕ್ರಮಗಳ ಕುರಿತು ಜನ ಸಮುದಾಯದಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಗ್ರಾಮದ ರಸ್ತೆಗಳಲ್ಲಿ ಪಾದಯಾತ್ರೆ ಮೂಲಕ ಹಮ್ಮಿಕೊಂಡಿದ್ದ ‘ಪಂಚಾಯತ್ ರಾಜ್ ಇಲಾಖೆಯ’ ಮಾಸ್ಕ್ ದಿನಾಚರಣೆಯ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.
ಸರಕಾರದ ನಿರ್ದೇಶನದಂತೆ ಜಿಲ್ಲೆಯ ಎಲ್ಲಾ 6 ತಾಲ್ಲೂಕುಗಳು ಮತ್ತು 122 ಗ್ರಾಮ ಪಂಚಾಯತಿಗಳಲ್ಲಿ ಮಾಸ್ಕ್ ದಿನವನ್ನು ಆಚರಿಸಿ ಕೋವಿಡ್-19 ಬಗ್ಗೆ ಜನಜಾಗೃತಿ ಮೂಡಿಸಲಾಗಿದೆ. ಗ್ರಾಮಗಳಲ್ಲಿ ಜನರು ಎಲ್ಲೆಂದರಲ್ಲಿ, ಕಟ್ಟೆಗಳ ಮೇಲೆ ಗುಂಪಾಗಿ ಕುಳಿತು ಚರ್ಚಿಸುವುದು, ಒಟ್ಟಾಗಿ ಕುಳಿತುಕೊಳ್ಳುವುದು ಮಾಡುತ್ತಿದ್ದಾರೆ. ಈ ರೀತಿ ನಡೆದುಕೊಳ್ಳುವುದು ಅವರ ಜೀವಗಳಿಗೆ ಅಪಾಯ ಎನ್ನುವ ಸಂದೇಶವನ್ನು ಅವರಿಗೆ ತಲುಪಿಸಿ, ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಜೀವನ ನಿರ್ವಹಿಸಬೇಕು. ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು, ಆಗಾಗ್ಗೆ ಕೈತೊಳೆದುಕೊಳ್ಳುವ ಮೂಲಕ ಕೊರೊನಾ ವೈರಸ್ ವಿರುದ್ಧ ಜಯ ಸಾಧಿಸಬಹುದು ಎನ್ನುವ ಸಂದೇಶವನ್ನು ತಲುಪಿಸುವುದೇ ಮಾಸ್ಕ್ ದಿನಾಚರಣೆಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಚಂದ್ರಾಮ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಮಕ್ಬುಲ್ ಪಟೇಲ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಹಣಮಂತರೆಡ್ಡಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಎಇಇ ಆನಂದ, ಸಿಡಿಪಿಒ ರಾಧಾ ಮಣ್ಣೂರು, ಮನರೆಗಾ ಸಹಾಯಕ ನಿರ್ದೇಶಕ ಚಂದ್ರಶೇಖರ ಪವಾರ್ ಸೇರಿದಂತೆ ಗ್ರಾ.ಪಂ ಸದಸ್ಯರು, ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯರು, ಅಂಗನಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಸ್ವಚ್ಛ ಭಾರತ ಮಿಷನ್ ಸಮಾಲೋಚಕ ನಾರಾಯಣ ಅವರು ಜಾಥಾ ಕಾರ್ಯಕ್ರಮ ನಿರ್ವಹಿಸಿದರೆ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಭೀಮರಾಯ ಪಾದಯಾತ್ರೆಯನ್ನು ಸಂಘಟಿಸಿ, ವೇದಿಕೆ ಕಾರ್ಯಕ್ರಮ ನಿರ್ವಹಿಸಿದರು.