Thursday, August 18, 2022

Latest Posts

ಯಾದಗಿರಿ| ಪರೀಕ್ಷಾ ಕೇಂದ್ರಗಳ ಸ್ಯಾನಿಟೈಸ್ ಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸೂಚನೆ

ಯಾದಗಿರಿ: ಜಿಲ್ಲೆಯಲ್ಲಿ ಜೂನ್ 18ರಂದು ನಡೆಯುವ ಪಿಯುಸಿ ಮತ್ತು ಜೂನ್ 25ರಿಂದ ನಡೆಯುವ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳನ್ನು ಕಡ್ಡಾಯವಾಗಿ ಸ್ಯಾನಿಟೈಸ್ ಮಾಡಬೇಕು ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಸರ್ಕಾರದ ಕಾರ್ಯದರ್ಶಿಗಳು ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎ.ಬಿ. ಇಬ್ರಾಹಿಂ ಅವರು ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಕೋವಿಡ್-19 ಸಂಬoಧ ನಡೆದ ಸಭೆಯಲ್ಲಿ ಜಿಲ್ಲಾಡಳಿತ ಕೈಗೊಂಡ ಮುಂಜಾಗ್ರತಾ ಕ್ರಮಗಳ ಬಗ್ಗೆ ವಿವರವಾದ ಮಾಹಿತಿ ಪಡೆದುಕೊಂಡು ಅವರು ಮಾತನಾಡಿದರು.
ಪರೀಕ್ಷೆಗಳು ವಿದ್ಯಾರ್ಥಿಗಳ ಬಾಳಿನಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸುತ್ತವೆ. ಪ್ರಯುಕ್ತ, ಕೋವಿಡ್ ಬಗ್ಗೆ ಅವರಲ್ಲಿ ಯಾವುದೇ ಆತಂಕದ ಛಾಯೆ ಇರಬಾರದು. ಈ ನಿಟ್ಟಿನಲ್ಲಿ ಪರೀಕ್ಷಾ ಕೇಂದ್ರಗಳಲ್ಲಿನ ಖುರ್ಚಿ, ಟೇಬಲ್ ಸೇರಿದಂತೆ ಎಲ್ಲಾ ವಸ್ತುಗಳು ಸ್ಯಾನಿಟೈಸ್ ಮಾಡಬೇಕು. ಶೌಚಾಲಯ, ವಿದ್ಯುತ್ ವ್ಯವಸ್ಥೆ ಇರಬೇಕು. ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳಿಗೂ ಮಾಸ್ಕ್ಗಳನ್ನು ವಿತರಿಸಬೇಕು. ಪರೀಕ್ಷೆ ಸುಸೂತ್ರವಾಗಿ ನಡೆಯಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ನಿರ್ದೇಶಿಸಿದರು.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಬಳಸುವುದು, ಕೈತೊಳೆದುಕೊಳ್ಳುವುದು ಜೀವನದ ಭಾಗವಾಗಬೇಕು. ಕೋವಿಡ್ ನಿಯಂತ್ರಣದಲ್ಲಿ ಸರ್ಕಾರದ ಪ್ರಯತ್ನದ ಜೊತೆಗೆ ಸಂಘ-ಸAಸ್ಥೆಗಳು ಮತ್ತು ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ. ಸಾರ್ವಜನಿಕರ ಸಹಕಾರ ಇಲ್ಲವಾದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡರೂ ಸಫಲತೆ ಸಾಧ್ಯವಿಲ್ಲ. ಕೊರೊನಾ ವೈರಸ್ ನಮ್ಮನ್ನು ಬಿಟ್ಟು ತೊಲಗಿಲ್ಲ ಮತ್ತು ಜನಜೀವನ ಸಹಜತೆಗಾಗಿ ಲಾಕ್‌ಡೌನ್ ಸಡಿಲಿಕೆ ಮಾಡಲಾಗಿದೆ ಎಂಬುದು ಜನರ ಮನಸ್ಸಿನಲ್ಲಿ ಬಂದಾಗ ಮಾತ್ರ ಕೋವಿಡ್ ಮುಕ್ತ ಜಿಲ್ಲೆಯನ್ನಾಗಿಸಬಹುದು ಎಂದು ಸಲಹೆ ನೀಡಿದರು.
ಪ್ರತಿನಿತ್ಯ ಹೆಚ್ಚಿನ ಮಾದರಿಗಳ ಪರೀಕ್ಷೆ ನಡೆಸಬೇಕು. ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳಲ್ಲಿರುವ ವಲಸಿಗರಿಗೆ ಆಹಾರ ಪೂರೈಕೆಯಲ್ಲಿ ಲೋಪ ಕಂಡುಬರಬಾರದು. ಅದೇ ರೀತಿ ಗೃಹ ದಿಗ್ಬಂಧನದಲ್ಲಿರುವ ಜನರ ಮೇಲೆ ಇನ್ನೂ ಹೆಚ್ಚಿನ ನಿಗಾವಹಿಸಬೇಕು. ಇದಕ್ಕಾಗಿ ಗ್ರಾಮ ಮಟ್ಟದಲ್ಲಿ ರಚಿಸಿರುವ ಟಾಸ್ಕ್ ಫೋರ್ಸ್ ಅನ್ನು ಸಕ್ರಿಯಗೊಳಿಸಿ ಎಂದು ಅವರು ಸೂಚಿಸಿದರು.
ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಮಾತನಾಡಿ, ಗೃಹ ದಿಗ್ಬಂಧನದಲ್ಲಿರುವ ವಲಸೆಗಾರರಿಗೆ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಲು ಮತ್ತು ಅವರ ಆರೋಗ್ಯ ಸ್ಥಿತಿ ವಿಚಾರಿಸಲು ಕರೆ ಮಾಡಲಾಗುತ್ತಿದ್ದು, ಇದುವರೆಗೆ 15,264 ಜನರಿಗೆ ಕರೆ ಮಾಡಲಾಗಿದೆ. ಅಲ್ಲದೇ, ಗ್ರಾಮ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಗಳಿಂದ ನಿಗಾವಹಿಸಲಾಗುತ್ತಿದೆ. ಅದೇ ರೀತಿ ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರ ಸಹಾಯ ಪಡೆದು ನಗರ ಪ್ರದೇಶದವರ ಮೇಲೆ ನಿಗಾವಹಿಸಲಾಗಿದೆ. ಜಿಲ್ಲೆಯಾದ್ಯಂತ “ಹೆಲ್ತ್ ವಾಚ್ ಆ್ಯಪ್” ಮೂಲಕ ನಡೆಸುತ್ತಿರುವ ಕುಟುಂಬಗಳ ಸಾರ್ವತ್ರಿಕ ಸಮೀಕ್ಷೆ ಕಾರ್ಯ ಶೇ.90.60ರಷ್ಟು ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದರು.
ಗೃಹ ದಿಗ್ಬಂಧನದಲ್ಲಿರುವವರು ತಮ್ಮ ಅವಲೋಕನಾ ಅವಧಿ ಮುಗಿಯುವವರೆಗೆ ಕಡ್ಡಾಯವಾಗಿ ಮನೆಯಲ್ಲಿ ಇರತಕ್ಕದ್ದು. ಒಂದು ವೇಳೆ ಗೃಹ ದಿಗ್ಬಂಧನ ಬಿಟ್ಟು ಹೊರಗಡೆ ತಿರುಗಾಡುವುದು ಕಂಡುಬAದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಜೊತೆಗೆ ಅಂತವರನ್ನು ಪುನಃ ಸಾಂಸ್ಥಿಕ ದಿಗ್ಬಂಧನದ ಅವಲೋಕನೆಗಾಗಿ ಕಳುಹಿಸಲಾಗುತ್ತಿದೆ. ಮನೆ ಬಿಟ್ಟು ಹೊರಗಡೆ ತಿರುಗಾಡದೆ ಗೃಹ ದಿಗ್ಬಂಧನ ಪಾಲನೆ ಮಾಡುತ್ತಿರುವ ಜಿಲ್ಲೆಯ ವಲಸೆ ಕಾರ್ಮಿಕರಿಗೆ ಅಜೀಮ್ ಪ್ರೇಮ್ ಜೀ ಫೌಂಡೆಷನ್ ವತಿಯಿಂದ ಆಹಾರ ಧಾನ್ಯದ ಕಿಟ್‌ಗಳನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಋಷಿಕೇಶ್ ಭಗವಾನ್ ಸೋನವಣೆ, ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ್, ಸಹಾಯಕ ಆಯುಕ್ತರಾದ ಶಂಕರಗೌಡ ಎಸ್.ಸೋಮನಾಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎಸ್. ಪಾಟೀಲ್, ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಿಶೇಷ ಅಧಿಕಾರಿ ಡಾ.ಶಂಕರಗೌಡ ಐರೆಡ್ಡಿ ಸೇರಿದಂತೆ ಇನ್ನಿತರರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!