ಯಾದಗಿರಿ : ರಾಜ್ಯದಲ್ಲಿ ಕೊವಿಡ್-19 ಸೊಂಕು ಹರಡುವುದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದು ರೋಗ ಪತ್ತೆ ಹಚ್ಚುವಲ್ಲಿ ಬಳಸಲಾಗುವ ಆರ್.ಟಿ ಪಿಸಿಆರ್ ಉಪಕರಣಗಳು ಪಶುಸಂಗೋಪನೆ ಇಲಾಖೆಯ ಮತ್ತು ಪಶುವೈದ್ಯಕೀಯ ವಿಶ್ವವಿದ್ಯಾಲಯಗಳ ಲ್ಯಾಬ್ ಗಳಲ್ಲಿ ಲಭ್ಯವಿದ್ದು, ಉಪಕರಣಗಳನ್ನು ಸಹ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಬಳಸಿಕೊಳ್ಳಲು ಆರೋಗ್ಯ ಇಲಾಖೆಗೆ ಪತ್ರ ಬರೆಯಲಾಗಿತ್ತು. ಸದ್ಯ ಈ ಉಪಕರಣಗಳನ್ನು ಕೊವಿಡ್-19 ಪತ್ತೆಗೆ ಬಳಸಿಕೊಳ್ಳಲು ಸರ್ಕಾರ ಆದೇಶ ಹೊರಡಿಸಿದೆ. ಇದರಿಂದಾಗಿ ಸೋಂಕು ಪತ್ತೆಗೆ ಮತ್ತಷ್ಟು ವೇಗ ದೊರೆಯಲಿದೆ ಎಂದು ಪಶು ಸಂಗೋಪನಾ ಹಾಗೂ ಯಾದಗಿರಿ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೋಗ ಪತ್ತೆ ಹಚ್ಚುವಲ್ಲಿ ಲ್ಯಾಬ್ಗಳ ಪಾತ್ರ ಪ್ರಮುಖವಾಗಿದ್ದು, ಹೆಬ್ಬಾಳ ಪಶುವೈದ್ಯಕೀಯ ಕಾಲೇಜಿನಲ್ಲಿ ಲಭ್ಯವಿದ್ದ 2 ಆರ್.ಟಿ ಪಿಸಿಆರ್ ಉಪಕರಣಗಳು ಆರೋಗ್ಯ ಇಲಾಖೆಯ ಲ್ಯಾಬ್ ಗಳಿಗೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.
ಕೃಷಿ ವಿಶ್ವವಿದ್ಯಾಲಯ ಬೆಂಗಳೂರು ಮತ್ತು ಧಾರವಾಡ, ಕರ್ನಾಟಕ ಡಿ.ಎನ್.ಎ ಸಂಶೋಧನಾ ಸಂಸ್ಥೆ ಧಾರವಾಡ ಹಾಗೂ ಧಾರವಾಡದ ಕೃಷಿ ಜೈವಿಕ ತಂತ್ರಜ್ಞಾನ ಸಂಸ್ಥೆಯ ಉಪಕರಣಗಳನ್ನು ಸಹ ಕೊವಿದ್-19 ಪತ್ತೆಗೆ ಬಳಸಿಕೊಳ್ಳಲು ಐ.ಸಿ.ಎಂ.ಆರ್ ನಿಯಮಾವಳಿಗಳ ಪ್ರಕಾರ ಉಪಕರಣಗಳನ್ನು ಹಸ್ತಾಂತರಿಸಲಾಗಿದೆ. ಈ ಉಪಕರಣಗಳಿಂದ ಕೊವಿದ್-19 ರ ಪರೀಕ್ಷೆ ಜೈವಿಕ ಸುರಕ್ಷತಾ ಮಟ್ಟ-೨ ರಲ್ಲಿ ಮಾಡಬೇಕಾಗಿರುವುದರಿಂದ ಸಾಕಷ್ಟು ಎಚ್ಚರವಹಿಸಿ ಕಾರ್ಯನಿರ್ವಹಿಸಬೇಕಾಗುತ್ತದೆ. ಸಧ್ಯ ಈ ಎಲ್ಲ ಉಪಕರಣಗಳನ್ನು ಬಳಸಿಕೊಂಡಿದ್ದಾದಲ್ಲಿ ಅಂದಾಜು ಸುಮಾರು ೧೦,೦೦೦ ಟೆಸ್ಟಗಳನ್ನು ಮಾಡಬಹುದಾಗಿದೆ. ಅಲ್ಲದೆ ಉಪಕರಣಗಳ ಮೇಲೆ ಕಾರ್ಯ ನಿರ್ವಹಿಸುವ ನುರಿತ ತಂತ್ರಜ್ಞರನ್ನು ಈ ಕೆಲಸಕ್ಕೆ ನಿಯೋಜಿಸಲಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.