ಯಾದಗಿರಿ : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯಾದ್ಯಂತ ಮೇ ೧೯ರಿಂದ ಜೂನ್ ೧೮ರವರೆಗೆ ಹಮ್ಮಿಕೊಂಡಿರುವ “ಬದು ನಿರ್ಮಾಣ ಮಾಸಾಚರಣೆ” ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ ಅವರು ಮಂಗಳವಾರ ಚಾಲನೆ ನೀಡಿದರು.
ವಡಗೇರಾ ತಾಲ್ಲೂಕಿನ ವಡಗೇರಾ ಎಚ್. ಗ್ರಾಮ ಪಂಚಾಯತಿಯ ಸರ್ವೇ ನಂಬರ್ ೨೯/೧ ರ ಶಿವಣ್ಣ ತಂದೆ ಹಣಮಂತ್ರಾಯ ಇವರ ೪ ಎಕರೆ ಜಮೀನಿನಲ್ಲಿ ಕ್ಷೇತ್ರಬದು ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ ಅವರು, ಕೂಲಿಕಾರರ ಉದ್ಯೋಗ ಚೀಟಿಗಳನ್ನು ಪರಿಶೀಲಿಸಿದರು. ಕೂಲಿಕಾರರೊಂದಿಗೆ ಮಾತನಾಡಿ, ಅವರಿಗೆ ದಿನಕ್ಕೆ ೨೭೫ ರೂ.ಗಳ ಕೂಲಿ ಸಿಗುವ ಮಾಹಿತಿ ಇರುವುದನ್ನು ಖಚಿತಪಡಿಸಿಕೊಂಡರು.
ಶಹಾಪುರ ತಾಲ್ಲೂಕಿಗೆ ಮರಳಿ ಬಂದ ವಲಸಿಗರೆಲ್ಲರಿಗೆ ಉದ್ಯೋಗ ಚೀಟಿಗಳನ್ನು ವಿತರಿಸಲು ಹಾಗೂ ಕ್ವಾರಂಟೈನ್ ಕೇಂದ್ರಗಳಿಗೆ ಹೋಗಿ ಅಲ್ಲಿ ನಿಗಾದಲ್ಲಿರುವ ಕೂಲಿಕಾರರಿಗೆ ಜಾಬ್ ಕಾರ್ಡ್ ಕೊಟ್ಟು ಕೆಲಸ ನೀಡಬೇಕು. ಕ್ವಾರಂಟೈನ್ ಕೇಂದ್ರಗಳ ವಲಸಿಗರಿಗೆ ಅಭಿಯಾನ ಮಾದರಿಯಲ್ಲಿ ಜಾಬ್ ಕಾರ್ಡ್ಗಳನ್ನು ವಿತರಿಸಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಲು ಕ್ರಮ ವಹಿಸುವಂತೆ ಸ್ಥಳದಲ್ಲಿದ್ದ ಶಹಾಪುರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಗನ್ನಾಥ ಮೂರ್ತಿ, ಸಹಾಯಕ ನಿರ್ದೇಶಕರಾದ ಶಾರದಾ ಅವರಿಗೆ ಸೂಚಿಸಿದರು.
ಜಿಲ್ಲಾ ಮನರೆಗಾ ನೋಡಲ್ ಅಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ, ವಡಗೇರಾ ಎಚ್. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗೋಪಾಲ ನಾಯಕ್, ಎಡಿಪಿಸಿ ಬನ್ನಪ್ಪ, ಡಿಐಇಸಿ ಪರಶುರಾಮ, ಡಿಐಎಂಎಸ್
ಲಕ್ಷ್ಮೀನಾರಾಯಣ , ಟಿಸಿ ರವೀಂದ್ರ ದೇಸಾಯಿ, ಪಿಡಿಒ ಮಲ್ಲಿಕಾರ್ಜುನ ಸಜ್ಜನ್, ಟಿಎಇ ಶ್ರೀನಿವಾಸ ರೆಡ್ಡಿ ಮತ್ತು ಗ್ರಾಮಸ್ಥರು ಸ್ಥಳದಲ್ಲಿ ಹಾಜರಿದ್ದರು.