ಯಾದಗಿರಿ: ಕೋವಿಡ್-19 ಸಂಬoಧ ಯಾದಗಿರಿ ತಾಲ್ಲೂಕಿನ ಯರಗೋಳ ಸಮೀಪ ಸ್ಥಾಪಿಸಿರುವ ಚೆಕ್ಪೋಸ್ಟ್ ಅನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಿ, ಸುಸಜ್ಜಿತ ಚೆಕ್ಪೋಸ್ಟ್ ನಿರ್ಮಾಣ ಮಾಡುವಂತೆ ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ಅವರು ಸೂಚಿಸಿದರು.
ಯರಗೋಳ ಚೆಕ್ಪೋಸ್ಟ್ಗೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ಪಕ್ಕದ ಕಲಬುರಗಿ ಜಿಲ್ಲೆಯಲ್ಲಿ ಕೋವಿಡ್-೧೯ ಸಾಕಷ್ಟು ಪ್ರಕರಣಗಳು ಕಂಡುಬoದಿವೆ. ಯಾದಗಿರಿ ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಪ್ರಕರಣಗಳು ಕಂಡುಬoದಿರುವುದಿಲ್ಲ. ಪ್ರಯುಕ್ತ ಚೆಕ್ಪೋಸ್ಟ್ನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸರಕು ಸಾಗಣೆ ವಾಹನ ಮತ್ತು ಮೆಡಿಕಲ್ ಎಮರ್ಜೆನ್ಸಿ ಅನುಮತಿ ಪಡೆದವರಿಗೆ ಮಾತ್ರ ಚೆಕ್ಪೋಸ್ಟ್ ಮೂಲಕ ಪ್ರಯಾಣಿಸಲು ಅವಕಾಶ ನೀಡಿ ಎಂದು ನಿರ್ದೇಶಿಸಿದರು.
ಪ್ರಯಾಣಿಕರ ಮೇಲೆ ನಿಗಾವಹಿಸಲು ಚೆಕ್ಪೋಸ್ಟ್ನಲ್ಲಿ ಸಿಸಿ ಟಿ.ವಿ ಕ್ಯಾಮರಾ ಅಳವಡಿಸಬೇಕು. ಇಲ್ಲಿ ಕಾರ್ಯನಿರ್ವಹಿಸುವ ಪೊಲೀಸ್, ಆರೋಗ್ಯ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳ ಅನುಕೂಲಕ್ಕಾಗಿ ಶೆಡ್ ನಿರ್ಮಾಣ ಮಾಡಬೇಕು. ಜೊತೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಸೂಚಿಸಿದ ಜಿಲ್ಲಾಧಿಕಾರಿಗಳು, ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಪಾಡುವುದು ಮತ್ತು ಮಾಸ್ಕ್ ಧರಿಸುವುದು ಕಡ್ಡಾಯ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಋಷಿಕೇಶ್ ಭಗವಾನ್ ಸೋನವಣೆ, ಸಹಾಯಕ ಆಯುಕ್ತರಾದ ಶಂಕರಗೌಡ ಎಸ್.ಸೋಮನಾಳ ಅವರು ಉಪಸ್ಥಿತರಿದ್ದರು.