Saturday, August 13, 2022

Latest Posts

ಯಾದಗಿರಿ| ಹೈಟೆಕ್ ಗ್ರಂಥಾಲಯ ನಿರ್ಮಾಣಕ್ಕೆ ಉಸ್ತುವಾರಿ ಸಚಿವರಿಂದ ಭೂಮಿ ಪೂಜೆ

ಯಾದಗಿರಿ: ನಗರದ ಗ್ರಾಮೀಣ ಪೊಲೀಸ್ ಠಾಣೆ ರಸ್ತೆಯ ವಿಶ್ವರಾಧ್ಯ ನಗರದಲ್ಲಿ ನೂತನ ಹೈಟೆಕ್ ಗ್ರಂಥಾಲಯ ಕಟ್ಟಡ ನಿರ್ಮಾಣ ಮಾಡಲು ಪಶುಸಂಗೋಪನೆ, ಹಜ್ ಮತ್ತು ವಕ್ಫ್ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಬಿ.ಚವ್ಹಾಣ ಅವರು ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಸಿ.ಎ. ನಿವೇಶನದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಯೋಜನೆಯಡಿ 1.70 ಕೋಟಿ ರೂ. ಅನುದಾನದಲ್ಲಿ ಹೈಟೆಕ್ ಗ್ರಂಥಾಲಯ ಕಟ್ಟಡ ನಿರ್ಮಾಣವಾಗಲಿದೆ. ಇದರಿಂದ ಯಾದಗಿರಿ ನಗರದ ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುವ ಉದೋಗಾಕಾಂಕ್ಷಿಗಳಿಗೆ ಅನುಕೂಲವಾಗಲಿದೆ ಎಂದು ಸಚಿವರು ಆಶಾಭಾವನೆ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಮಾತನಾಡಿ, ಜಿಲ್ಲಾ ಗ್ರಂಥಾಲಯವು ಡಿಜಿಟಲೀಕರಣವಾಗಿದ್ದು, ವಿದ್ಯಾರ್ಥಿಗಳಿಗೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಗೂ ಹಿರಿಯ ನಾಗರಿಕರಿಗೆ, ಮಹಿಳೆಯರಿಗೆ, ಮಕ್ಕಳಿಗೆ ಪ್ರತ್ಯೇಕ ವಿಭಾಗಗಳನ್ನು ಹೊಂದಿರುತ್ತವೆ. ಈಗಾಗಲೇ ಯಾದಗಿರಿ ಜಿಲ್ಲೆಯ 7 ಡಿಜಿಟಲ್ ಗ್ರಂಥಾಲಯಗಳಲ್ಲಿ ಲಾಕ್‍ಡೌನ್ ಅವಧಿಯಲ್ಲಿ ಸುಮಾರು 8,000 ಜನ ನೋಂದಣಿಯಾಗಿ ಮನೆಯಿಂದಲೇ ಕಂಪ್ಯೂಟರ್, ಟ್ಯಾಬ್, ಮೊಬೈಲ್ ಮೂಲಕ ಗ್ರಂಥಾಲಯದ ಉಪಯೋಗ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಮುಖ್ಯ ಗ್ರಂಥಾಲಯಾಧಿಕಾರಿ ಎಂ.ಎಸ್.ರೆಬಿನಾಳ ಅವರು ಮಾತನಾಡಿ, ಕೆ.ಕೆ.ಆರ್.ಡಿ.ಬಿ. ಯೋಜನೆಯಡಿಯಲ್ಲಿ ಶಹಾಪುರದಲ್ಲಿ 95 ಲಕ್ಷ ರೂ., ಗುರುಮಠಕಲ್‍ನಲ್ಲಿ 95 ಲಕ್ಷ ರೂ., ಹುಣಸಗಿಯಲ್ಲಿ 55 ಲಕ್ಷ ರೂ., ಸುರಪುರದಲ್ಲಿ 50 ಲಕ್ಷ ರೂ. ಅನುದಾನದಲ್ಲಿ ಸೇರಿದಂತೆ ಗ್ರಾಮೀಣ ಮಟ್ಟದಲ್ಲಿ ತಲಾ 25 ಲಕ್ಷ ರೂ. ವೆಚ್ಚದಲ್ಲಿ ವಾಗಣಗೇರಾ, ಅಬ್ಬೆತುಮಕೂರು, ಕಾಮನಟಗಿ, ಮಾಧ್ವಾರ, ಗೆದ್ದಲಮರಿ, ದೇವತ್ಕಲ್, ಮುದನೂರು, ಕೊಡೇಕಲ್, ಹೆಬ್ಬಾಳ(ಬಿ), ಕಂದಕೂರಗಳಲ್ಲಿ ಸಾರ್ವಜನಿಕ ಗ್ರಂಥಾಲಯಗಳ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.
ಶಾಸಕರಾದ ವೆಂಕಟರೆಡ್ಡಿಗೌಡ ಮುದ್ನಾಳ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ, ಗ್ರಂಥಪಾಲಕ ಪರಮೇಶ್ವರ ಮದರಗಿ, ಗ್ರಂಥಾಲಯ ಸಹಾಯಕ ಪಾಟೀಲ್ ಬಸನಗೌಡ, ಎಂ.ಎನ್.ಪಟೇಲ್, ಗೌತಮ್ ಸೇರಿದಂತೆ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‍ಗಳು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss