Wednesday, June 29, 2022

Latest Posts

ಯಾದಗಿರಿ| 44.92ಕೋಟಿ ರೂ. ಲಾಭದಲ್ಲಿ ರಾಜ್ಯ ಹಣಕಾಸು ಸಂಸ್ಥೆ

ಯಾದಗಿರಿ: ಕರ್ನಾಟಕ ರಾಜ್ಯ ಸರಕಾರದ ಹಲವಾರು ಬಡ್ಡಿ ಸಹಾಯಧನ ಯೋಜನೆಯಡಿ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು ಮಹಿಳಾ ಉದ್ಯಮಿದಾರರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಉದ್ಯಮಿದಾರರ ಜವಳಿ ಮತ್ತು ಕೈಮಗ್ಗ ಘಟಕಗಳಿಗೆ, ಮೊದಲ ಪೀಳಿಗೆ ಉದ್ಯಮಿದಾರರು, ಎಲ್ಲಾ ವರ್ಗದ ಉದ್ಯಮಿದಾರರಿಗೆ ಬಡ್ಡಿ ಸಹಾಧನ ಯೋಜನೆ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಉದ್ಯಮಿಗಳಿಗೆ ಪೂರಕ ಭದ್ರತಾ ಖಾತರಿ ಯೋಜನೆಗಳಲ್ಲಿ ನೀಡಿರುವ ಸಹಾಯಧನದ ಫಲವಾಗಿ ಪ್ರಸಕ್ತ ವರ್ಷದಲ್ಲಿ ಸಂಸ್ಥೆಯು 44.92ಕೋಟಿ ರೂ. ಲಾಭಗಳಿಸಿದೆ ಎಂದು ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯ ಹಣಕಾಸು ಸಂಸ್ಥೆಯ 61ನೇ ವಾರ್ಷಿಕ ಮಹಾಸಭೆಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಏಕರೂಪ್ ಕೌರ್ ಅವರು ವೀಡಿಯೋ ಕಾನ್ಫೆರೆನ್ಸ್ ಮೂಲಕ ಸಂಸ್ಥೆಯ ಶೇರುದಾರರನ್ನು ಉದ್ದೇಶಿಸಿ ಮಾತನಾಡಿ, 2020ರ ಮಾರ್ಚ್ 31ಕ್ಕೆ ಅಂತ್ಯಗೊಂಡ ಸಂಸ್ಥೆಯ ಕಾರ್ಯಾಚರಣೆಯನ್ನು ಹಾಗೂ ಪರಿಶೋಧಿಸಲ್ಪಟ್ಟ ಲೆಕ್ಕಪತ್ರಗಳ ಪ್ರಮುಖ ಅಂಶಗಳನ್ನು ಹಂಚಿಕೊಂಡರು.
2019-20ರ ಆರ್ಥಿಕ ವರ್ಷದಲ್ಲಿ ವಿವಿಧ ಸಾಲ ಯೋಜನೆಗಳ ಮೂಲಕ 667.81 ಕೋಟಿ ರೂ.ಗಳ ಸಾಲ ಮಂಜೂರು ಮಾಡಲಾಗಿದೆ. 727.90ಕೋಟಿ ರೂ.ಗಳನ್ನು ವಿತರಣೆ ಮಾಡಲಾಗಿದೆ. ಸಂಸ್ಥೆಯು ಈಗಾಗಲೇ 21,700 ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ 2000 ಕೋಟಿ ರೂ.ಗಳಿಗೂ ಅಧಿಕ ಸಾಲ ಮಂಜೂರಾತಿ ನೆರವನ್ನು ನೀಡಿರುತ್ತದೆ. 30,000 ಕ್ಕೂ ಹೆಚ್ಚಿನ ಮಹಿಳಾ ಉದ್ಯಮಿದಾರರಿಗೆ 4243.67ಕೋಟಿ ರೂ.ಗಳ ಅವದಿ ಸಾಲ ಮಜೂರಾತಿ ಮಾಡಿರುತ್ತದೆ. 41,000 ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಉದ್ಯಮಿಗಳಿಗೂ ಇದುವರೆಗೂ 1748.40ಕೋಟಿ ರೂಗಳ ಸಾಲ ಮಂಜೂರಾತಿ ನೆರವನ್ನು ಒದಗಿಸಿದೆ. ಮೊದಲ ಪೀಳಿಗೆ ಉದ್ಯಮಿದಾರರಿಗೆ 164.70 ಕೋಟಿ ರೂಗಳ ಸಾಲ ಮಂಜೂರು ಒದಗಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಂಸ್ಥೆಯು ಕೈಗೊಂಡಿರುವ ಹಲವಾರು ಉಪಕ್ರಮಗಳು ಹಾಗೂ ಪ್ರಮುಖ ಯೋಜನೆಗಳಿಗೆ ಶೇ. 4ರ ನಿವ್ವಳ ಬಡ್ಡಿದರದಲ್ಲಿ ಆರ್ಥಿಕ ಸಹಾಯ ಯೋಜನೆಗಳ ಯಶಸ್ವಿ ಅನುಷ್ಠಾನದ ಫಲವಾಗಿ ಸಂಸ್ಥೆಯು ಸಾಧನೆ ಮಾಡಲು ಸಾಧ್ಯವಾಗಿದೆ. ಕರ್ನಾಟಕ ಸರಕಾರದ ವತಿಯಿಂದ ಉಳಿದ ಬಡ್ಡಿದರವು ಸಹಾಯಧನದ ರೂಪದಲ್ಲಿ ಪಾವತಿಯಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
2020-21ನೇ ಸಾಲಿನ ಗುರಿ: 2020-21ನೇ ಹಣಕಾಸು ವರ್ಷವನ್ನು ಕೋವಿಡ್-19ರ ಸವಾಲುಗಳ ವರ್ಷವೆಂದು ಪರಿಗಣಿಸಲಾಗಿದೆ. ರಾಜ್ಯದ ಆರ್ಥಿಕತೆಯಲ್ಲಾದ ಚಂಚಲತೆಯಿಂದಾಗಿ ಪ್ರಸ್ತುತ ವರ್ಷದಲ್ಲಿ ಸಂಸ್ಥೆಯೂ ಸಹಾ ಮಿಶ್ರ ಬೆಳವಣಿಗೆಯನ್ನೇ ನಿರೀಕ್ಷಿಸಲಿದೆ. ಕೊರೊನಾ ಏಟಿನಿಂದ ಮಧ್ಯಮ, ಸಣ್ಣ ಹಾಗೂ ಸೂಕ್ಷ್ಮ ಘಟಕಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನೇಕ ಪರಿಹಾರ ಹಾಗೂ ರಿಯಾಯಿತಿಗಳನ್ನು ನೀಡುವ ದಿಕ್ಕಿನಲ್ಲಿ ಕಾರ್ಯಗತವಾಗಿವೆ ಎಂದು ಅವರು ಹೇಳಿದ್ದಾರೆ.
2020-21ರ ಆರ್ಥಿಕ ವರ್ಷದಲ್ಲಿ ಸಂಸ್ಥೆಯು ತಲಾ 600 ಕೋಟಿ ರೂ. ಮಂಜೂರಾತಿ ಗುರಿಯನ್ನು ಹೊಂದಿದ್ದು, ಕರ್ನಾಟಕ ಸರಕಾರದ ಬಡ್ಡಿ ಧನಸಹಾಯ ಯೋಜನೆಗಳ ಯಶಸ್ವಿ ಅನುಷ್ಠಾನದೊಂದಿಗೆ ಸಮಾಜದ ವಿವಿಧ ವರ್ಗಗಳಿಂದ ಸ್ಥಾಪಿಸಲ್ಪಡುವ ಎಂಎಸ್ಎಂಇ ಗಳಿಗೆ ನೆರವು ನೀಡುವ ಕಡೆಗೆ ಹೆಚ್ಚಿನ ಗಮನವನ್ನು ಕೇಂದ್ರಿಕರಿಸಲಿದೆ. ಎಂಎಸ್ಎಂಇ ಗಳ ಪರಿಷ್ಕøತ ನಿರೂಪಣೆಯು 2020ರ ಜುಲೈ 1ರಿಂದ ಜಾರಿಗೊಳ್ಳಲಿದ್ದು, ಉತ್ಪಾದಕ ಹಾಗೂ ಸೇವಾ ವಲಯಗಳಿಂದ ಸ್ಥಾಪಿಸಲ್ಪಡುವ ಘಟಕಗಳಿಗೆ ಕರ್ನಾಟಕ ರಾಜ್ಯ ಸರ್ಕಾರದ ಸಬ್ವೆನ್ಷನ್ ಯೋಜನೆಯನ್ನು 2020-21ರಿಂದ ಸಂಸ್ಥೆಯಲ್ಲಿ ಪುನರ್ ಪರಿಚಯಿಸುತ್ತಿರುವುದು ಉದ್ಯಮಿಗಳಿಗೆ ವರದಾನವಾಗಲಿದೆ. ಅಲ್ಲದೆ ಅನುತ್ಪಾದಕ ಆಸ್ತಿಗಳನ್ನು ಮತ್ತಷ್ಟು ಕಡಿಮೆಗೊಳಿಸಲು ಸಂಸ್ಥೆಯು ಹೆಚ್ಚಿನ ಒತ್ತು ನೀಡಲಿದೆ ಎಂದು ಅವರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss