ಶಿವಮೊಗ್ಗ: ಯಾವುದೇ ಕಾರಣಕ್ಕೂ ಸಿಗಂದೂರು ಕ್ಷೇತ್ರ ಕೈತಪ್ಪಿ ಹೋಗಬಾರದು. ಇದನ್ನು ಉಳಿಸಿಕೊಳ್ಳಬೇಕು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪ ಹೇಳಿದರು.
ಸಾಗರ ತಾಲೂಕಿನ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಸಲಹಾ ಮತ್ತು ಉಸ್ತುವಾರಿ ಸಮಿತಿ ನೇಮಕ ಮಾಡಿರುವ ಹಿನ್ನೆಲೆಯಲ್ಲಿ ಜಿಲ್ಲಾ ಆರ್ಯ ಈಡಿಗ ಸಂಘದ ನೇತೃತ್ವದಲ್ಲಿ ಸೋಮವಾರ ಪ್ರಮುಖ ಮುಖಂಡರ ಸಭೆ ನಡೆಯಿತು. ಸಭೆಯಲ್ಲಿ ಕಾಗೋಡು ತಿಮ್ಮಪ್ಪ ಮಾತನಾಡಿದರು.
ದೇವಸ್ಥಾನಕ್ಕೆ ಸಮಿತಿ ರಚನೆ ಬಗ್ಗೆ ನಾವ್ಯಾರೂ ನಿರೀಕ್ಷೆಯನ್ನೇ ಮಾಡಿರಲಿಲ್ಲ. ಕೆಲವರ ಕಿತಾಪತಿಯಿಂದಾಗಿ ಸಮಿತಿ ರಚನೆ ಆಗಿದೆ. ಇದೊಂದು ಆಘಾತಕಾರಿ ಸಂಗತಿ. ಯಾವುದೇ ಕಾರಣಕ್ಕೂ ಕ್ಷೇತ್ರ ಕೈತಪ್ಪಿ ಹೋಗಬಾರದು. ಈ ಬಗ್ಗೆ ಸಂಸದ ರಾಘವೇಂದ್ರ ಹತ್ತಿರವೂ ಮಾತನಾಡುತ್ತೇನೆ. ಧರ್ಮದರ್ಶಿ ರಾಮಪ್ಪ ಬಳಿಯೇ ಅಧಿಕಾರ ಇರಬೇಕು ಎಂದರು.
ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, ಆರ್ಯ ಈಡಿಗರ ಸಂಘದ ಅಧ್ಯಕ್ಷ ಹುಲ್ತಿಕೊಪ್ಪ ಶ್ರೀಧರ್, ಬಂಡಿ ರಾಮಚಂದ್ರ ಇನ್ನಿತರರು ಇದ್ದರು.