ಹೊಸದಿಗಂತ ವರದಿ, ಬಾಗಲಕೋಟೆ:
ನನಗೆ ಆ ಖಾತೆ ಬೇಕು ಈ ಖಾತೆ ಬೇಕು ಎಂಬ ಬೇಡಿಕೆಯನ್ನು ಇಟ್ಟಿಲ್ಲ. ತಮಗೆ ಇಷ್ಟವಾದ ಖಾತೆಯನ್ನು ಪಡೆಯಬೇಕು ಎಂದು ಆಕಾಂಕ್ಷಿ ಇರುವವರೆಲ್ಲಾ ಖಾತೆಯನ್ನು ಪಡೆದುಕೊಂಡು ನಂತರ ಕೊನೆಯದಾಗಿ ಉಳಿಯುವ ಖಾತೆಯನ್ನು ಪಡೆಯುತ್ತೇನೆ. ಯಾವ ಖಾತೆ ಇದ್ದರೂ ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ ಎಂದು ನೂತನ ಸಚಿವ ಮುರಗೇಶ ನಿರಾಣಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲೆಯ ಕೆರಕಲಮಟ್ಟಿಯಲ್ಲಿ ಭಾನುವಾರ ನಿರಾಣಿ ಉದ್ಯಮ ಸಮೂಹದಿಂದ ವಿವಿಧ ಕಾರ್ಖಾ ನೆಗಳ ಉದ್ಘಾಟನೆ ಹಾಗೂ ಪುನರರಾಂಭ ಕಾರ್ಯಕ್ರಮಕ್ಕೆ ಆಗಮಿಸಲಿರುವ ಗೃಹ ಮಂತ್ರಿ ಅಮಿತ್ ಶಾ ಅವರ ಕಾರ್ಯಕ್ರಮದ ಸಿದ್ಧತೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅವರು ಹೇಳಿದರು.
ಯಾವ ಖಾತೆ ಇದ್ದರೇನು ಪಕ್ಷಕ್ಕೆ, ರಾಜ್ಯಕ್ಕೆ ಹೆಸರು ಬರುವ ಕೆಲಸವನ್ನು ಮಾಡುವೆ. ಬೃಹತ್ ಮಧ್ಯಮ ಕೈಗಾರಿಕಾ ಸಚಿವರಾಗಿ ಹಿಂದೆ ಕೆಲಸ ಮಾಡಿದ್ದೇನೆ. ಈಗ ಆ ಖಾತೆಯನ್ನು ಪಡೆಯಲು ಸಾಧ್ಯವಿಲ್ಲ. ಆ ಹುಡಗಿಗೆ ಮದುವೆಯಾಗಿದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಸಂಪುಟ ವಿಸ್ತರಣೆ ನಂತರ ಯಾವುದೇ ಪಕ್ಷದಲ್ಲಿ ಭಿನ್ನಮತವಿಲ್ಲ. ಒಂದು ಕುಟುಂಬದಲ್ಲಿ ಯಾವ ರೀತಿ ಸಣ್ಣಪುಟ್ಟ ಸಮಸ್ಯೆ ಇರುತ್ತದೆ ಆ ರೀತಿ ಪಕ್ಷದಲ್ಲಿ ಇರುವುದು ಸಹಜ. ಪಕ್ಷದಲ್ಲಿ ಭಿನ್ನಮತವಿಲ್ಲ ಆದರೆ ಭಿನ್ನವಿಚಾರ ಇದೆ. ಸಿಡಿ ವಿಚಾರ ಬಗ್ಗೆ ಪದೇ ಪದೇ ಕೇಳಬೇಡಿ. ಅದಕ್ಕೆ ಉತ್ತರ ಕೊಡುವವರು ಬೇರೆ ಇದ್ದಾರೆ. ಅವರು ಸಾಕಷ್ಟು ಬುದ್ದಿಯನ್ನು ಹೊಂದಿದವರು. ನಾನು ಸಿಡಿಗೀಡಿ ಏನೂ ವಿಚಾರ ಇಲ್ಲ ಬರೀ ರಾಜ್ಯಕ್ಕೆ ಹೆಚ್ಚು ಅಭಿವೃದ್ಧಿ ಮಾಡಬೇಕು ಕನಸು ಇದೆ. ನಿರುದ್ಯೋಗಿಗಳಿಗೆ ಉದ್ಯೋಗ ನೀಡಬೇಕು ಎಂಬ ಮಹಾದಾಸೆ ಹೊಂದಿದ್ದೇನೆ ಎಂದು ಹೇಳಿದರು.
ನನಗೆ ಸಚಿವ ಸ್ಥಾನ ಸಿಗದಂತೆ ನಮ್ಮ ಜಿಲ್ಲೆಯ ಯಾವ ನಾಯಕರೂ ಅಡ್ಡಗಾಲು ಹಾಕಿಲ್ಲ. ಎಲ್ಲರೂ ಬೆಂಬಲ ಮಾಡಿದ್ದರಿಂದಲೇ ಮಂತ್ರಿಯಾಗಿದ್ದೇನೆ. ಪಕ್ಷದ ಶಿಸ್ತಿನ ಸಿಫಾಯಿ ಆಗಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ಮೇಲೆ ಕಣ್ಣಿದೆಯಾ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ನಿರಾಣಿ ಯಾವುದೇ ಜಿಲ್ಲೆ ಕೊಟ್ಟರೂ ಜವಾಬ್ದಾರಿ ನಿರ್ವಹಿಸುವೆ ಎಂದರು. ಸಚಿವ ಸ್ಥಾನ ನೀಡದಿದ್ದಾಗಲೂ ನಾನು ಯಾವುದೇ ಅಸಮಾಧಾನ ಹೊಂದಿರಲಿಲ್ಲ. ಮುಂದಿನ ಭಾರಿ ಬೀಳಗಿ ವಿಧಾನಸಭೆ ಕ್ಷೇತ್ರಕ್ಕೆ ಟಿಕೆಟ್ ನೀಡದಿದ್ದರೂ ಸಾಮಾನ್ಯ ಕಾರ್ಯಕರ್ತನಾಗಿ ಬಿಜೆಪಿಯಲ್ಲಿ ಕೆಲಸ ಮಾಡುವೆ ಎಂದು ಹೇಳಿದರು.
ಕೃಷ್ಣಾ ಮೇಲ್ದಂಡೆ ಯೋಜನೆ ಕುರಿತು ಅನುದಾನ ಬಿಡುಗಡೆಗೆ ಕೋರಾನಾ ಇರುವುದರಿಂದ ಸ್ವಲ್ಪ ಅಡೆತಡೆಯಾಗಿದೆ. ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿಯವರು ರೈತರ ಬಗ್ಗೆ ಕಾಳಜಿ ಹೊಂದಿದ್ದು ಎಲ್ಲ ಕೆಲಸವೂ ವೇಗವನ್ನು ಪಡೆದುಕೊಳ್ಳಲಿದೆ. ಕಾಳಿ ನದಿಯ ನೀರು ಸಮುದ್ರ ಸೇರುತ್ತಿದ್ದು ಇದರಿಂದ ಐದಾರು ಜಿಲ್ಲೆಗೆ ನೀರು ಉಪಯುಕ್ತವಾಗುವ ರೀತಿ ಎಂ.ಆರ್.ಎನ್. ಸಂಸ್ಥೆಯಿಂದ ಯೋಜನಾ ವರದಿ ಸಿದ್ದಪಡಿಸಿದ್ದು ಐದಾರು ಸಾವಿರ ಕೋಟಿ ರೂ.ಗಳಲ್ಲಿ ಈ ಯೋಜನೆ ಮುಗಿಯಲಿದ್ದು ಅದಕ್ಕೂ ಒತ್ತು ನೀಡಲಾಗುವುದು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಜಿಲ್ಲಾ ಪಂಚಾಯಿತಿ ಸದಸ್ಯ ಹೂವಪ್ಪ ರಾಠೋಡ, ಮುಖಂಡ ರಮೇಶ ಮೊರಟಗಿ, ಮಹಾಂತೇಶ ಕೋಲ್ಕಾರ, ದೇಸಾಯಿ ಇದ್ದರು.