ಹೊಸ ದಿಗಂತ ವರದಿ, ದಾವಣಗೆರೆ:
ಕೊರೋನಾ ಸೋಂಕು ಯುಗಾದಿವರೆಗೂ ಕಡಿಮೆಯಾಗುವ ಲಕ್ಷಣಗಳಿಲ್ಲ. ಶಾಲಾ-ಕಾಲೇಜು ಪುನರಾರಂಭವಾದರೂ ಮತ್ತೆ ಮುಚ್ಚುತ್ತವೆ ಎಂದು ಹಾಸನ ಜಿಲ್ಲೆಯ ಕೋಡಿಹಳ್ಳಿ ಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಮಾಜಿ ಶಾಸಕ ಯಜಮಾನ್ ಮೋತಿ ವೀರಣ್ಣ ನಿವಾಸಕ್ಕೆ ಸೋಮವಾರ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಶ್ವೀಜ ಕಾರ್ತೀಕ ಮಾಸದಲ್ಲಿ ಸೋಂಕು ಉಲ್ಬಣವಾಗುತ್ತದೆಂದು ಮೊದಲೇ ಹೇಳಿದ್ದೆ. ಅದೇ ರೀತಿ ಆಗಿದ್ದು, ಯುಗಾದಿವರೆಗೂ ಕೊರೋನಾ ಸೋಂಕು ಕಡಿಮೆಯಾಗುವ ಲಕ್ಷಣಗಳಿಲ್ಲ. ಸೋಂಕಿನ ಎರಡನೇ ಅಲೆ ಅಲ್ಲಲ್ಲಿ ಆರಂಭವಾಗಲಿದೆ. ಅದು ಮಾನಸಿಕ ಕ್ಷೆಭೆಯಿಂದಾಗಿ ಬರಲಿದ್ದು, ಅದು ಸಾವನ್ನೂ ತರುತ್ತದೆ. ಯುಗಾದಿವರೆಗೂ ಸೋಂಕಿನ ಅಲೆ ಹೋಗುತ್ತದೆ ಎಂದರು.
ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠ eನ, ವಿವೇಕವುಳ್ಳವನು ಮನುಷ್ಯ. ಈತನಿಗೆ ಬುದ್ಧಿ, ಹೀನ , ತಿಳಿವಳಿಕೆ ಇದೆ ಎನ್ನುತ್ತಾರೆ. ಇಂತಹ ಮನುಷ್ಯ ಆಗಾಗ ಅeನ, ಅವಿವೇಕಕ್ಕೆ ಒಳಪಟ್ಟರೆ, ತನ್ನ ಆಚಾರ-ವಿಚಾರ ಕಳೆದುಕೊಂಡರೆ, ಅಂತಹ ಮನುಷ್ಯನನ್ನು ಎಚ್ಚರಿಸಲು ಕಾಲಕಾಲಕ್ಕೆ ಅನೇಕ ರೋಗ, ಖಾಯಿಲೆ ಬರುತ್ತವೆ. ಜಗತ್ತಿಗೆ ಕೊರೋನಾ ಹೊಸದೇನೂ ಅಲ್ಲ. ಹಿಂದಿನ ಕಾಲದಿಂದಲೂ ಗಂಟಲು ಬೇನೆ, ಗಂಟಲು ರೋಗ ಎನ್ನುತ್ತಾ ಬಂದಿದ್ದಾರೆ. ಈ ರೋಗ ಬಂದ 2 ದಿನಕ್ಕೆ ರೋಗಿಗಳು ಸತ್ತು ಹೋಗುತ್ತಿದ್ದರು. ಶ್ವಾಸಕೋಶ, ಗಂಟಲಿಗೆ ಈ ರೋಗ ಬರುತ್ತದೆ. ಸ್ವಚ್ಛತೆಯನ್ನು ಕಾಪಾಡಿಕೊಳ್ಳದೇ ಇರುವುದೂ ಇದಕ್ಕೆ ಕಾರಣ. ಮನೆ ಹೊರಗೆ, ಒಳಗೆ ಎಲ್ಲಾ ಕಡೆ ಶುಚಿತ್ವವನ್ನು ಮನುಷ್ಯ ಕಾಯ್ದುಕೊಳ್ಳುತ್ತಿಲ್ಲ. ಇದೇ ಕಾರಣಕ್ಕೆ ಖಾಯಿಲೆ ಬೆನ್ನು ಹತ್ತಿದ್ದು, ದಿನದಿನಕ್ಕೂ ಘೋರವಾಗುತ್ತಿದೆ. ಕೇವಲ 1 ಗ್ರಾಂ ತೂಕದ ಈ ವೈರಸ್ ಇಡೀ ಜಗತ್ತನ್ನೇ ಹೆದರಿಸುತ್ತಿದೆ. ಮನುಷ್ಯನಿಗೆ ಮಾರಕವಾಗುವ ಈ ಸೋಂಕು ಮತ್ತಷ್ಟು ವ್ಯಾಪಿಸುವ ಲಕ್ಷಣಗಳಿವೆ ಎಂದು ಅವರು ಸೂಚ್ಯವಾಗಿ ಎಚ್ಚರಿಸಿದರು.
ಉತ್ತರ ಕರ್ನಾಟಕದಲ್ಲಿ ಜಲ ಪ್ರಳಯವಾಗುತ್ತದೆಂದು ಭವಿಷ್ಯ ಹೇಳಿದ್ದೆವು. ಮಳೆ ಬಂದು ಅಶಾಂತಿ ಹೆಚ್ಚಾಗುತ್ತಿದೆ. ಅದು ಸತ್ಯವಾಗಿದೆ. ಇನ್ನೂ ಡಿಸೆಂಬರ್ವರೆಗೂ ಅಂತಹ ಪ್ರಸಂಗಗಳ ಸಾಧ್ಯತೆ ಇದೆ. ಮನುಷ್ಯ ಎಲ್ಲವನ್ನೂ ಮರೆತಿದ್ದಾನೆ. ದುಡ್ಡೇ ದೊಡ್ಡಪ್ಪ ಆಗಿದೆ. ತತ್ವಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಸತ್ಯ ಸತ್ತು ಹೋಗಿದೆ, ಜನರು ಮೋಸದಲ್ಲಿ ತೊಡಗಿದ್ದಾರೆ. ಕೊರೋನಾ ವೈರಸ್ ಗಾಳಿಯಿಂದ ಹರಡುವುದಿಲ್ಲ. ಕೆಮ್ಮಿದರೆ, ಉಗಿದರೆ, ಕಫದಿಂದ ಬರುವಂತಹದ್ದು. ಆದರೆ ಮುಂದಿನ ದಿನಗಳಲ್ಲಿ ಬರುವ ಖಾಯಿಲೆ ವಾಯುವಿನಿಂದ ಬರುವಂತಹದ್ದಾಗಿದ್ದು, ಭವಿಷ್ಯದ ದಿನಗಳು ಕಠಿಣವಾಗಿರಲಿವೆ. ಮನುಷ್ಯ ಆರೋಗ್ಯ, ಸ್ವಚ್ಛತೆ, ನೈರ್ಮಲ್ಯ ಕಾಪಾಡಿಕೊಳ್ಳುವತ್ತ ಗಮನ ಹರಿಸಲಿ ಎಂದು ಕೋಡಿಹಳ್ಳಿ ಶ್ರೀಗಳು ಕಿವಿಮಾತು ಹೇಳಿದರು.
ವಿಶ್ವಾದ್ಯಂತ ರಾಜಕೀಯ ವಿಪ್ಲವ
ಗ್ರಹಣ ಕೆಟ್ಟದಿರುವುದರಿಂದ ಜಗತ್ತಿನಲ್ಲಿ ರಾಜಕೀಯ ವಿಪ್ಲವವಾಗಲಿದ್ದು, ಜನವರಿ, ಫೆಬ್ರವರಿಯಲ್ಲಿ ಏನು ಬೇಕಾದರೂ ಆಗಬಹುದು. ವಿಶ್ವದಲ್ಲಿ ರಾಜಕೀಯ ವಿಪ್ಲವ ಆಗುತ್ತದೆಂದು ಹೇಳಿದ್ದೆ. ಅದರಂತೆ ಅಮೇರಿಕಾದ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಸೋಲುವ ಮೂಲಕ ನಮ್ಮ ಭವಿಷ್ಯ ನಿಜವಾಗಿದೆ. ರಾಜ್ಯ ರಾಜಕಾರಣದ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ಒಬ್ಬ ವ್ಯಕ್ತಿ ವಿಚಾರದ ಬಗ್ಗೆಯೂ ಏನೂ ಹೇಳಲ್ಲ. ರಾಜ್ಯ, ರಾಷ್ಟ್ರ ಸೇರಿದಂತೆ ವಿಶ್ವಾದ್ಯಂತ ರಾಜಕೀಯ ವಿಪ್ಲವವಾಗಲಿದೆ.
ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಕೋಡಿಹಳ್ಳಿ ಮಠದ ಶ್ರೀಗಳು