ಬೆಂಗಳೂರು: 2006ರ ಜ.1ಕ್ಕೂ ಮೊದಲು ನಿವೃತ್ತಿ ಹೊಂದಿರುವ ಸರ್ಕಾರಿ ಪದವಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರುಗಳಿಗೆ ಯುಜಿಸಿ ಪರಿಷ್ಕೃತ ವೇತನದ ಪಿಂಚಣಿ ಸೌಲಭ್ಯ ನೀಡಲಾಗುವುದಿಲ್ಲ ಎಂಬ ಅಂಶವನ್ನೊಳಗೊಂಡ ಮಸೂದೆಗೆ ಮಂಗಳವಾರ ವಿಧಾನಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಮಸೂದೆ ಕುರಿತು ವಿವರಿಸಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, 2006ಕ್ಕಿಂತ ಮೊದಲು ನಿವೃತ್ತರಾದವರಿಗೆ ಯುಜಿಸಿ ಪ್ರಕಾರ ಪಿಂಚಣಿ ನೀಡಲು ಹಿಂದಿನ ಸರ್ಕಾರ ನಿರಾಕರಿಸಿತ್ತು. ಅದನ್ನು ಪ್ರಶ್ನಿಸಿ ಕೆಲವರು ಕೋರ್ಟ್ ಮೊರೆ ಹೋಗಿದ್ದರು. ಅರ್ಜಿದಾರರ ಮನವಿ ಪರಿಗಣಿಸುವಂತೆ ನ್ಯಾಯಾಲಯ ಆದೇಶ ನೀಡಿದೆ. ಬಳಿಕ ಸುಗ್ರೀವಾಜ್ಞೆ ತರಲಾಗಿತ್ತು. ಆದ್ದರಿಂದ ಆರ್ಥಿಕ ಹೊರೆ ತಪ್ಪಿಸಿಕೊಳ್ಳಲು ಈ ಮಸೂದೆ ತರಲಾಗಿದೆ. ಇದರ ಪ್ರಕಾರ, 2006ರ ಮೊದಲಿನ ಎಲ್ಲ ಸರ್ಕಾರಿ ನೌಕರರಿಗೆ ಒಂದೇ ರೀತಿ ಪಿಂಚಣಿ ಸಿಗಲಿದೆ ಎಂದರು.
ಒಂದು ವೇಳೆ ಈ ಸೌಲಭ್ಯ 2006ಕ್ಕಿಂತ ಮೊದಲು ನಿವೃತ್ತರಾದವರಿಗೂ ವಿಸ್ತರಿಸಿದರೆ ರಾಜ್ಯದ ಬೊಕ್ಕಸಕ್ಕೆ ವಾರ್ಷಿಕ 800 ಕೋಟಿ ರೂ.ಗಳಿಂದ ಸಾವಿರ ಕೋಟಿ ರೂ.ಗಳವರೆಗೆ ಹೊರೆ ಬೀಳುತ್ತದೆ ಎಂದು ತಿಳಿಸಿದರು.
ಆಗ ಬಿಜೆಪಿಯ ಅರವಿಂದ ಲಿಂಬಾವಳಿ, ಏಕರೂಪದ ಪಿಂಚಣಿ ಒದಗಿಸುವ ಆಲೋಚನೆ ಒಳ್ಳೆಯದು. ಉಳಿದ ಸರ್ಕಾರಿ ನೌಕರರು ಪ್ರಾಧ್ಯಾಪಕರಿಗೆ ನೀಡುವಷ್ಟೇ ವೇತನ ಕೇಳಿದರೆ ಏನು ಮಾಡುತ್ತೀರಿ ಎಂದು ಪ್ರಶ್ನಿಸಿದರು.
ಅದಕ್ಕೆ ಉತ್ತರಿಸಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ಪರಿಷ್ಕೃತ ಪಿಂಚಣಿ ಸೌಲಭ್ಯ ನೀಡುವುದು ರಾಜ್ಯ ಸರ್ಕಾರಕ್ಕೆ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಸಹ 2010ರಲ್ಲಿ ಪತ್ರ ಬರೆದು ತಿಳಿಸಿದೆ. ಯುಜಿಸಿ ನಿಯಮಗಳಿಗೆ ಕಾನೂನಿನ ಬಲ ಇದ್ದರೂ, ರಾಜ್ಯಗಳ ಯೋಜನೆಗಳಿಗೆ ಹೊರತಾದುದು ಅಲ್ಲ ಎಂದು ಜಗದೀಶ್ ಪ್ರಸಾದ್ ಶರ್ಮಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ ಎಂದು ವಿವರಿಸಿದರು.