ನವದೆಹಲಿ: ವೃದ್ಧರಿಗೇ ಅತೀ ಅಪಾಯಕಾರಿಯಾಗಿ ಕಾಡುತ್ತಿರುವ ಕೊರೋನಾಗೆ ಇಲ್ಲೊಬ್ಬರು ಬರೋಬ್ಬರಿ 106 ವರ್ಷದ ವ್ಯಕ್ತಿ ಸವಾಲೆಸೆದು ಸೋಂಕಿನಿಂದ ಗೆದ್ದುಬಂದಿದ್ದಾರೆ!
ಈ ಶುಭ ಸುದ್ದ ಬಂದಿರುವುದು ದೆಹಲಿಯ ನವಾಬ್ಗಂಜ್ನಿಂದ. ಇಲ್ಲಿನ 106 ವರ್ಷದ ವ್ಯಕ್ತಿ ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮೂಲಕ ಭಾರತದಲ್ಲಿ ಕೊರೊನಾದಿಂದ ಗುಣಮುಖರಾದ ಮೊದಲ ಅತ್ಯಂತ ಹಿರಿಯ ವ್ಯಕ್ತಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಆರಂಭದಲ್ಲಿ ಇವರ ಮಗನಿಗೆ ಸೋಂಕು ತಗುಲಿದ್ದು, ಅದು ಅವರಿಗೂ ಹರಡಿತ್ತು. ಏ. 14 ರಂದು ಅಸ್ವಸ್ಥಗೊಂಡ ಅವರನ್ನು ದೆಹಲಿಯ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷೆಯ ವೇಳೆ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆ ಅಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು. ಮೇ 1 ರಂದು ಅವರು ಕೊರೊನಾದಿಂದ ಸಂಪೂರ್ಣ ಗುಣಮುಖರಾಗಿದ್ದು, ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಒಟ್ಟಿನಲ್ಲಿ ವೈದ್ಯರಿಗೂ ಅಚ್ಚರಿ ತಂದಿರುವ ಅವರು ನೂರು ವರ್ಷ ದಾಟಿದ ವೃದ್ಧರೂ ಕಿಲ್ಲರ್ ಕೊರೊನಾ ವಿರುದ್ಧ ಹೋರಾಡಿ ಗುಣಮುಖವಾಗಬಹುದು ಎನ್ನುವುದನ್ನ ನಿರೂಪಿಸಿದ್ದಾರೆ.