Sunday, August 14, 2022

Latest Posts

ಯುಪಿಎಸ್‍ಸಿ ಪರೀಕ್ಷೆಯಲ್ಲಿ ರೈತನ ಮಗ ಮಳವಳ್ಳಿಯ ಅಭಿಷೇಕ್‍ ಗೌಡನಿಗೆ 278ನೇ ರ್‍ಯಾಂಕ್, ಐಎಎಸ್ ಹುದ್ದೆಗೆ ಆಯ್ಕೆ

ಮಂಡ್ಯ : ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮಾರಗೌಡನಹಳ್ಳಿ ಗ್ರಾಮದ ಅಭಿಷೇಕ್‍ಗೌಡ 2019ರ ಯುಪಿಎಸ್‍ಸಿ ಪರೀಕ್ಷೆಯಲ್ಲಿ 278ನೇ ರ್‍ಯಾಂಕ್ ಪಡೆದು ಐಎಎಸ್ ಹುದ್ದೆಗೆ ಆಯ್ಕೆಯಾಗಿದ್ದಾರೆ.
1992 ಡಿ.10ರಂದು ಜವರಾಯಿಗೌಡ ಮತ್ತು ಜಯಮ್ಮ ದಂಪತಿಯ ನಾಲ್ಕನೇ ಮಗನಾಗಿ ಜನಿಸಿದ ಇವರಿಗೆ ಇಬ್ಬರು ಅಕ್ಕಂದಿರು ಮತ್ತು ಒಬ್ಬರು ಅಣ್ಣ ಇದ್ದಾರೆ. ಅಕ್ಕ ಅಬಕಾರಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೆ, ಅಣ್ಣ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಇವರದು ರೈತಾಪಿ ಕುಟುಂಬ.
ಇನ್ನು ಅಭಿಷೇಕ್‍ಗೌಡ ಅವರು ಒಂದರಿಂದ ಹತ್ತನೇ ತರಗತಿವರೆಗೆ ಮಾರಗೌಡನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮುಗಿಸಿದರು. 2008ರಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.95.84 ಅಂಕದೊಂದಿಗೆ ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದರು. ಬಳಿಕ ಕೊಮ್ಮೇರಹಳ್ಳಿಯ ವಿಶ್ವಮಾನವ ಸಂಸ್ಥೆಯಲ್ಲಿ ಪಿಯುಸಿ ವ್ಯಾಸಂಗಕ್ಕೆ ಸೇರಿಕೊಂಡು ವಿಜ್ಞಾನ ವಿಷಯ ಆಯ್ಕೆಮಾಡಿಕೊಂಡರು. 2010ರಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.95.33 ಅಂಕದೊಂದಿಗೆ ಜಿಲ್ಲೆಗೆ ಮೊದಲಿಗರಾದರು. ಈ ಬಳಿಕ ಹೊಸಕೋಟೆ ಎಂವಿಜೆ ಮೆಡಿಕಲ್ ಕಾಲೇಜಿಗೆ ಸೇರಿಕೊಂಡರು. 2016ರಲ್ಲಿ ಶೇ.70.79 ಅಂಕದೊಂದಿಗೆ ವೈದ್ಯಕೀಯ ಶಿಕ್ಷಣ ಪೂರ್ಣಗೊಳಿಸಿದರು.
ಪ್ರೌಢಶಾಲಾ ಹಂತದಿಂದಲೇ ಶಿಕ್ಷಕರು ಉನ್ನತಹುದ್ದೆ ಪಡೆಯಲು ಶ್ರಮಿಸುವಂತೆ ಸಲಹೆ ನೀಡುತ್ತಿದ್ದರು. ಇದನ್ನು ಮನಸ್ಸಿನಲ್ಲಿಯೇ ಇಟ್ಟುಕೊಂಡಿದ್ದ ಅಭಿಷೇಕ್‍ಗೌಡ, ಬೆಂಗಳೂರಿನಲ್ಲಿ ವೈದ್ಯ ವೃತ್ತಿ ಮಾಡಿಕೊಂಡು ಯುಪಿಎಸ್‍ಸಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. 2017ರಲ್ಲಿ ಮೊದಲ ಬಾರಿಗೆ ಪರೀಕ್ಷೆ ಬರೆದರೂ ಪ್ರಯೋಜನವಾಗಲಿಲ್ಲ. ಮತ್ತೆ 2018ರಲ್ಲಿ ಮತ್ತೆ ಪರೀಕ್ಷೆ ಬರೆಯುತ್ತಾರೆ. ಆಗಲೂ ಅವಕಾಶ ವಂಚಿತರಾಗುತ್ತಾರೆ. 2019ರಲ್ಲಿ ಪೂರ್ವಸಿದ್ಧತೆಯೊಂದಿಗೆ ಪರೀಕ್ಷೆ ಬರೆಯುವ ಇವರಿಗೆ ನಿರೀಕ್ಷಿತ ಫಲ ಸಿಕ್ಕಿದೆ.
ಸತತ ಎರಡು ವರ್ಷ ನಿರಂತರವಾಗಿ ಪರೀಕ್ಷೆಗೆಂದು ಮೀಸಲಿಟ್ಟರು. ಪ್ರಾರಂಭದ ಹಂತದಲ್ಲಿ ದಿನಕ್ಕೆ 8 ರಿಂದ 10 ಗಂಟೆ ವ್ಯಾಸಂಗ ಮಾಡುತ್ತಿದ್ದರು. ಇನ್ನು ಮೂರು ತಿಂಗಳು ಪರೀಕ್ಷೆ ಇದೆ ಎನ್ನುವಾಗ ದಿನಕ್ಕೆ 12 ರಿಂದ 14 ಗಂಟೆ ವ್ಯಾಸಂಗ ಮಾಡಿದರು. ಇದರೊಟ್ಟಿಗೆ ಕುಟುಂಬದವರು, ಶಿಕ್ಷಕರ ಪ್ರೇರಣೆಯ ಮಾತು ಸಾಧನೆ ಮಾಡಲು ಸಹಕಾರಿಯಾಗಿದೆ.
ಸಲಹೆ ನೀಡಿದ ಡಿಸಿ
ಯುಪಿಎಸ್‍ಸಿ ಪರೀಕ್ಷೆಗೆ ಸಿದ್ಥತೆ ಮಾಡಿಕೊಳ್ಳುತ್ತಿದ್ದ ಅಭಿಷೇಕ್‍ಗೌಡ ಅವರಿಗೆ ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಕೂಡ ಅಗತ್ಯ ಮಾಹಿತಿ ನೀಡಿದ್ದಾರೆ. ಪರೀಕ್ಷೆಗೆಂದೆ ಉತ್ತಮ ತರಬೇತಿ ನೀಡಿದ ಡಿಸಿ, ಆಡಳಿತಾತ್ಮಕ ವಿಷಯದ ಬಗ್ಗೆ ಮಾಹಿತಿ ನೀಡಿದ್ದರು. ಇದು ಕೂಡ ಸಾಧನೆಗೆ ಮೆಟ್ಟಿಲಾಗಿದೆ.
ಸತತ ಪ್ರಯತ್ನವಿದ್ದು ಗಮನ ಬೇರೆಡೆ ಕೊಡದೇ ಅಂದುಕೊಂಡಿರುವ ಗುರಿ ತಲುಪಬೇಕೆಂದು ನಿರ್ಧರಿಸಿ ವ್ಯಾಸಂಗ ಮಾಡಿದರೆ ಸಾಧನೆ ಮಾಡಬಹುದು. ನನ್ನ ಕುಟುಂಬದವರು, ಶಿಕ್ಷಕರಾದ ಪುಟ್ಟಸ್ವಾಮಿ, ಸಂಪತ್, ಬಸವರಾಜು ಅವರ ಪ್ರೇರಣೆಯ ಮಾತು ಹಾಗೂ ಡಿಸಿ ಡಾ.ಎಂ.ವಿ.ವೆಂಕಟೇಶ್ ಅವರ ಮಾರ್ಗದರ್ಶನದಿಂದ ನಿರೀಕ್ಷಿತ ಫಲ ಸಿಕ್ಕಿದೆ ಎಂದು ಅಭಿಷೇಕ್‍ಗೌಡ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss