ಮೈಸೂರು: ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿರುವ ಉತ್ತರ ಪ್ರದೇಶ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಕಾಂಗ್ರೆಸ್ನ ಮಾಜಿ ಸಂಸದ ಆರ್.ಧೃವನಾರಾಯಣ್ ಆಗ್ರಹಿಸಿದರು.
ಶುಕ್ರವಾರ ಮೈಸೂರಿನ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶದ
ಹತ್ರಾಸ್ ನಲ್ಲಿ ದಲಿತ ಯುವತಿ ಮೇಲಿನ ಅತ್ಯಾಚಾರ ಮತ್ತು ಸಾವಿನ ಪ್ರಕರಣ ದೇಶದ ತಲೆಬಾಗುವ ಹೇಯ ಕೃತ್ಯ.
ಆಸ್ಪತ್ರೆಗೆ ದಾಖಲಿಸಿದರೂ ಯುವತಿ ಸಾವನ್ನಪ್ಪಿರುವುದು ಘಟನೆಯ ಕ್ರೌರ್ಯಕ್ಕೆ ಸಾಕ್ಷಿ. ಆ ಬಾಲಕಿಯ ಶವಸಂಸ್ಕಾರವನ್ನು ಆ ಯುವತಿಯ ಪೋಷಕರನ್ನು ಹೊರತುಪಡಿಸಿ ಪೊಲೀಸರೇ ಮಾಡಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು. ಉತ್ತರಪ್ರದೇಶ ಪ್ರಸ್ತುತವಾಗಿ ಗೂಂಡಾರಾಜ್ಯವಾಗಿ ಮಾರ್ಪಟ್ಟಿದೆ. ಎನ್ಸಿ ಆರ್ಬಿ ಸಂಸ್ಥೆಯ ಪ್ರಕಾರ, ದಲಿತರ ಮೇಲಿನ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳಲ್ಲಿ ಉತ್ತರಪ್ರದೇಶ ದೇಶದಲ್ಲೇ ಮೊದಲನೇ ಸ್ಥಾನದಲ್ಲಿದೆ. ಇದು ನಿಜಕ್ಕೂ ಆತಂಕಕಾರಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.