Thursday, July 7, 2022

Latest Posts

ಯುವ ಜನರು ವಿವೇಚನೆಯಿಂದ ಮತ ಚಲಾಯಿಸಿ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಕೈ ಜೋಡಿಸಿ: ಜಿನರಾಳಕರ

ಹೊಸದಿಗಂತ ವರದಿ,ಕೊಗಡು:

ಯುವ ಜನರು ವಿವೇಚನೆಯಿಂದ ಮತ ಚಲಾಯಿಸಿ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಜಿನರಾಳಕರ ಭೀಮರಾವ ಲಗಮಪ್ಪ ಅವರು ಕರೆ ನೀಡಿದರು.

ನಗರದ ಜಿ.ಪಂ.ಸಭಾಂಗಣದಲ್ಲಿ ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ಸೋಮವಾರ ನಡೆದ ರಾಷ್ಟ್ರೀಯ ಮತದಾರರ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಭಾರತವು ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಪ್ರಜೆಗಳಿಂದ ಪ್ರಜೆಗಳಿಗಾಗಿ ಇರುವ ದೇಶವಾಗಿದೆ. 18 ವರ್ಷ ಪೂರ್ಣಗೊಂಡ ಪ್ರತಿಯೊಬ್ಬ ಮತದಾರರೂ ಕಡ್ಡಾಯವಾಗಿ ಮತಹಕ್ಕು ಚಲಾಯಿಸಬೇಕು. ರಾಷ್ಟ್ರ ನಿರ್ಮಾಣದಲ್ಲಿ ಪ್ರಜಾಪ್ರಭುತ್ವವು ಮೈಲುಗಲ್ಲಾಗಿದ್ದು, ಮತಹಕ್ಕನ್ನು ವಿವೇಚನೆಯಿಂದ ಚಲಾಯಿಸಬೇಕು. ಇದರಿಂದ ರಾಷ್ಟ್ರದ ಆಡಳಿತವನ್ನು ಸುಭದ್ರಗೊಳಿಸಲು ಸಾಧ್ಯ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರತಿಯೊಬ್ಬರೂ ಕಾನೂನನ್ನು ತಿಳಿದುಕೊಳ್ಳಬೇಕು. ಜೊತೆಗೆ ಪಾಲಿಸಬೇಕು. ತಾವು ಚಲಾಯಿಸುವ ಒಂದೊಂದು ಮತವೂ ಅಮೂಲ್ಯವಾಗಿದೆ. ಅಮೂಲ್ಯ ಮತವು ರಾಷ್ಟ್ರದ ಭವಿಷ್ಯವನ್ನು ರೂಪಿಸುತ್ತದೆ. ಆದ್ದರಿಂದ 18 ವರ್ಷ ಪೂರ್ಣಗೊಂಡವರು ಮತದಾನದ ಗುರುತಿನ ಚೀಟಿ ಪಡೆದು ಮತ ಹಕ್ಕು ಚಲಾಯಿಸಬೇಕು ಎಂದು ಅವರು ಸಲಹೆ ಮಾಡಿದರು.

ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧಿಸಿದಂತೆ ಉತ್ತಮ ಕಾರ್ಯ ನಿರ್ವಹಿಸಿದ್ದ ಬಿ.ಎಲ್.ಒ ಗಳಿಗೆ ಪ್ರಶಂಸನೀಯ ಪತ್ರ ವಿತರಿಸಲಾಯಿತು. ಪ್ರಬಂಧ, ಚಿತ್ರಕಲೆ, ರಸ ಪ್ರಶ್ನೆ ಹೀಗೆ ವಿವಿಧ ವಿಭಾಗಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಹಾಗೆಯೇ 18 ವರ್ಷ ಪೂರ್ಣಗೊಂಡ ಯುವ ಮತದಾರರಿಗೆ ಮತದಾನದ ಗುರುತಿನ ಚೀಟಿ ವಿತರಿಸಲಾಯಿತು.
ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭನ್ವರ್ ಸಿಂಗ್ ಮೀನಾ, ತಹಶೀಲ್ದಾರ್ ಮಹೇಶ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪಿ.ಎಸ್.ಮಚ್ಚಾಡೋ, ಶಿರಸ್ತೇದಾರರಾದ ಪ್ರಕಾಶ್, ಶ್ರೀನಿವಾಸ್, ಅನಿಲ್ ಕುಮಾರ್, ವೆಂಕಟೇಶ್, ಸಿನೋಜ್ ಇತರರು ಇದ್ದರು.

ನಗರದ ಸಂತ ಜೋಸೆಫರ ಶಾಲೆಯ ವಿದ್ಯಾರ್ಥಿನೀಯರು ರಾಷ್ಟ್ರಗೀತೆ, ನಾಡಗೀತೆ ಹಾಡಿದರು. ಭಾಗಮಂಡಲ ಕಾವೇರಿ ಕಾಲೇಜಿನ ಉಪನ್ಯಾಸಕ ಕೆ.ಜೆ.ದಿವಾಕರ ಅವರು ನಿರೂಪಿಸಿ ವಂದಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss