Sunday, August 14, 2022

Latest Posts

ಯುವ ಜನಾಂಗ ವಿವೇಕ ಪಥದಲ್ಲಿ ನಡೆಯಬೇಕು: ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ

ಹೊಸ ದಿಗಂತ ವರದಿ, ಚಿತ್ರದುರ್ಗ:

ಸ್ವಾಮಿ ವಿವೇಕಾನಂದ ಅವರು ಯುವ ಜನಾಂಗಕ್ಕೆ ಉತ್ತಮ ಮಾದರಿಯಾಗಿದ್ದಾರೆ. ಹಾಗಾಗಿ ಇಂದಿನ ಯುವ ಸಮುದಾಯ ಸ್ವಾಮಿ ವಿವೇಕಾನಂದರ ಮಾರ್ಗದಲ್ಲಿ ನಡೆಯಬೇಕು ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.
ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಗರದ ಸರ್ಕಾರಿ ಕಲಾ ಕಾಲೇಜಿಗೆ ಹೋಗುವ ಮಾರ್ಗಕ್ಕೆ ನಾಮಕಾರಣ ಮಾಡಿರುವ ’ಸ್ವಾಮಿ ವಿವೇಕಾನಂದ ನಾಮ ಫಲಕ’ ಉದ್ಘಾಟಿಸಿ ಮಾತನಾಡಿದ ಅವರು, ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟು ಹೋರಾಟ ನಡೆಸಿದ ಅನೇಕ ಮಹಾನೀಯರು ನಮ್ಮ ದೇಶದಲ್ಲಿ ಆಗಿಹೋಗಿದ್ದಾರೆ. ಅಂಥವರ ಹೆಸರುಗಳನ್ನು ವಿವಿಧ ಸ್ಥಳಗಳಿಗೆ ನಾಮಕಾರಣ ಮಾಡಿ ಅವರನ್ನು ಪ್ರತಿದಿನ ಸ್ಮರಿಸಿಕೊಳ್ಳುವ ಕೆಲಸವಾಗಬೇಕು ಎಂದರು.
ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಹೋರಾಟದ ಫಲವಾಗಿ ಇಂದು ಈ ರಸ್ತೆಗೆ ಸ್ವಾಮಿ ವಿವೇಕಾನಂದರ ಹೆಸರನ್ನು ನಾಮಕರಣ ಮಾಡಿರುವುದು ಉತ್ತಮ ಬೆಳವಣಿಗೆ. ಸ್ವಾಮಿ ವಿವೇಕಾನಂದ ಅವರ ತತ್ವಗಳನ್ನು ಯುವ ಜನಾಂಗ ಒಪ್ಪಿಕೊಳ್ಳಬೇಕು, ಅಪ್ಪಿಕೊಳ್ಳಬೇಕು. ನನಗೆ ನೂರಾರು, ಸಾವಿರಾರು ಸಂಖ್ಯೆಯ ಯುವಕರು ಬೇಕಿಲ್ಲ. ಸದೃಢ ಸಂಕಲ್ಪ ಹೊಂದಿರುವ ಹತ್ತು ಜನ ಯುವಕರು ಸಿಕ್ಕರೆ ಸಾಕು ಜಗತ್ತನ್ನು ಬದಲಿಸುತ್ತೇನೆ ಎನ್ನುತ್ತಿದ್ದವರು ಸ್ವಾಮಿ ವಿವೇಕಾನಂದ ಅವರು ಎಂದು ಸ್ಮರಿಸಿದರು.
ಹೊಲದಲ್ಲಿ ಹಾಕುವ ಬೆಳೆಯ ಜೊತೆಗೆ ಕಳೆಯೂ ಬೆಳೆಯುತ್ತದೆ. ಅದರಂತೆ ಮನುಷ್ಯ ಜೀವನದಲ್ಲಿ ಅನೇಕ ಕೆಟ್ಟ ವಿಚಾರಗಳು ಬರುತ್ತವೆ. ಯುವ ಜನಾಂಗ ಅವನ್ನು ಮೆಟ್ಟಿ ನಿಲ್ಲಬೇಕು. ಆದರ್ಶ ಪುರುಷರ ತತ್ವಾದರ್ಶಗಳನ್ನು ಅನುಸರಿಸುವ ಮೂಲಕ ಸಜ್ಜನರಾಗಬೇಕು. ಸ್ವಾಮಿ ವಿವೇಕಾನಂದ ಅವರ ಹೆಸರನ್ನು ಕೇವಲ ರಸ್ತೆಗೆ ಇಟ್ಟರೆ ಸಾಲದು, ಅವರ ಮಾರ್ಗದಲ್ಲಿ ನಡೆಯುವ ಕೆಲಸ ಮಾಡಬೇಕು. ಯುವ ಸಮುದಾಯ ನಡೆಯುವ ಮಾರ್ಗ ವಿವೇಕ ಪಥವಾಗಬೇಕು. ಅಂದಾಗ ಮಾತ್ರ ಅವರ ಹೆಸರು ಇಟ್ಟಿದ್ದಕ್ಕೆ ಸಾರ್ಥಕವಾಗಲಿದೆ ಎಂದರು.
ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ, ಚಿಕಾಗೋ ನಗರದಲ್ಲಿ ನಡೆದ ಅಂತರಾಷ್ಟ್ರ ಮಟ್ಟದ ಸರ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದರು. ಎಲ್ಲ ಧರ್ಮ ಗುರುಗಳ ಮಾತನಾಡಿದ ನಂತರ ಕೊನೆಯಲ್ಲಿ ವಿವೇಕಾನಂದ ಅವರಿಗೆ ಅವಕಾಶ ಮಾಡಿಕೊಡಲಾಯಿತು. ಆದರೂ ಅವರ ವಾಕ್ಚಾತುರ್ಯದಿಂದ ಇಡೀ ಸಭಿಕರರನ್ನು ಮತ್ರಮುಗ್ದರನ್ನಾಗಿ ಮಾಡಿದ್ದರು. ಇಂದಿನ ಯುವಕರು ಅವರಂತೆ ಪ್ರತಿಭಾವಂತರಾಗಬೇಕು ಎಂದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಜಿಲ್ಲಾ ಪ್ರಮುಖ ಹಾಗೂ ಎಸ್.ಆರ್.ಎಸ್. ಕಾಲೇಜಿನ ಪ್ರಾಚಾರ್ಯ ಈ.ಗಂಗಾಧರ್, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಮಂಜುನಾಥ್, ತಾ.ಪಂ. ಸದಸ್ಯ ಸುರೇಶ್‌ನಾಯ್ಕ್, ಎಬಿವಿಪಿ ನಗರ ಕಾರ್ಯದರ್ಶಿ ಚಂದ್ರಶೇಖರ್, ದೀಪಕ್‌ರಾಜ್, ಅವಿನಾಶ್, ಪ್ರಮೋದ್, ಮನೋಜ್, ಅಜಯ್, ಕೃತಿಕಾ, ಛಾಯಾ, ಮೇಘನಾ, ವಿಶ್ವ ಹಿಂದೂ ಪರಿಷತ್, ಭಜರಂಗ ದಳ, ಆರ್‌ಎಸ್‌ಎಸ್ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss