ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ತಮ್ಮ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡಿದ್ದಕ್ಕಾಗಿ ನಟ ಅಕ್ಷಯ್ ಕುಮಾರ್ ಬಿಹಾರ ಮೂಲದ ಯೂಟ್ಯೂಬರ್ ಮೇಲೆ 500 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ರಶೀದ್ ಸಿದ್ದಿಕಿ ಎಂಬವರು ತಮ್ಮ ಯೂಟ್ಯೂಬ್ ಚಾನೆಲ್ ಎಫ್ಎಫ್ ನ್ಯೂಸ್ನಲ್ಲಿ ತಮ್ಮ ವಿರುದ್ಧ ಹಲವು ಮಾನಹಾನಿಕರ ಮತ್ತು ಅವಹೇಳನಕಾರಿ ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದಾರೆ ಎಂದು ದೂರಿದ್ದಾರೆ.
ಈ ಹಿನ್ನೆಲೆ , ನವೆಂಬರ್ 17ರಂದು ಅಕ್ಷಯ್ ಕುಮಾರ್ ಕಾನೂನು ಸಂಸ್ಥೆ ಐಸಿ ಲೀಗಲ್ ಮೂಲಕ ನೋಟಿಸ್ ಕಳುಹಿಸಿದ್ದಾರೆ.
ನೋಟಿಸ್ ನಲ್ಲಿ ಅಕ್ಷಯ್, ಯೂಟ್ಯೂಬರ್ನಿಂದ ಬೇಷರತ್ತಾಗಿ ಕ್ಷಮೆಯಾಚಿಸಲು ತಾಕೀತು ಮಾಡಿದ್ದಾರೆ. ಅವರ ವಿರುದ್ಧ ಪ್ರತ್ಯೇಕ ಮಾನಹಾನಿ ಪ್ರಕರಣದಲ್ಲಿ ಮುಂಬೈ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಇತ್ತ ದೂರು ಸಲ್ಲಿಕೆಯಾಗಿರುವುದು ತಿಳಿಯುತ್ತಿದ್ದಂತೆ ಯೂಟ್ಯೂಬರ್ ಆ ಚಾನೆಲ್ನಿಂದ ಆಕ್ಷೇಪಾರ್ಹ ವಿಡಿಯೊಗಳನ್ನು ತೆಗೆದುಹಾಕಿದ್ದಾರೆ.
ಮಾನಹಾನಿಕರ ಮತ್ತು ಅವಹೇಳನಕಾರಿ ವಿಡಿಯೋಗಳ ಕಾರಣದಿಂದಾಗಿ ದೊಡ್ಡ ನಷ್ಟ ಉಂಟಾಗಿದೆ. ಜನರನ್ನು ದಾರಿ ತಪ್ಪಿಸಲು ಮತ್ತು ಹಲವು ಪ್ರಸಿದ್ಧ ವ್ಯಕ್ತಿಗಳ ಬಗ್ಗೆ ಸುಳ್ಳು ಸುದ್ದಿ ಹರಡಲು ಯೂಟ್ಯೂಬ್ ಡಿಜಿಟಲ್ ಮಾಧ್ಯಮ ಬಳಸಲಾಗಿದೆ ಎಂದು ಆರೋಪಿಸಿ 500 ಕೋಟಿ ರೂ. ಮಾನಹಾನಿ ಪ್ರಕರಣ ಸಿವಿಲ್ ಎಂಜಿನಿಯರ್ ರಶೀದ್ ಸಿದ್ದಿಕಿ ವಿರುದ್ಧ ದಾಖಲಾಗಿದೆ.