Sunday, August 14, 2022

Latest Posts

ಯೋಜನೆ ಅನುಷ್ಠಾನ, ಪ್ರಗತಿಯಲ್ಲಿ ಮುಂಚೂಣಿ ಜಿಲ್ಲೆ ದಕ್ಷಿಣ ಕನ್ನಡ: ಸಚಿವ ಕೋಟ

ಮಂಗಳೂರು:ಕೋವಿಡ್ ನಿಯಂತ್ರಣ, ಕೃಷಿ, ತೋಟಗಾರಿಕೆ, ಮೀನುಗಾರಿಕೆ ಮತ್ತು ಕುಡಿಯುವ ನೀರಿನ ಪೂರೈಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮುಂಚೂಣಿಯಲ್ಲಿದೆ. ಅತೀ ಹೆಚ್ಚು ಯೋಜನೆಗಳು ಮಂಜೂರು ಮತ್ತು ಅನುಷ್ಠಾನದಲ್ಲಿ ಬೆಂಗಳೂರು ನಂತರದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಇದೆ ಎಂದು ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಸಚಿವರು ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ರಾಜ್ಯ ಬಿಜೆಪಿ ಸರಕಾರದ ಒಂದು ವರ್ಷದ ಸಾಧನೆಯ ವರ್ಚುವಲ್ ಸಮಾರಂಭದಲ್ಲಿ ಪಾಲ್ಗೊಂಡು ಸರಕಾರದ ಸಾಧನೆಗಳ ‘ಸವಾಲುಗಳ 1 ವರ್ಷ ಪರಿಹಾರದ ಸ್ಪರ್ಶ’ ಪುಸ್ತಕವನ್ನು ಬಿಡುಗಡೆಗೊಳಿಸಿದರು. ಬಳಿಕ ಅವರು ಸುದ್ದಿಗಾರರ ಜೊತೆಯಲ್ಲಿ ಮಾತನಾಡಿದರು.
ರಾಜ್ಯ ಸರಕಾರದ ಸಾಧನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪಾಲು ಕೂಡಾ ಇದೆ. ವಿಶೇಷವಾಗಿ ಬಂದರುಗಳ ನಿರ್ಮಾಣ ಮತ್ತು ಅಭಿವೃದ್ಧಿಯಲ್ಲಿ ಜಿಲ್ಲೆ ಮುಂಚೂಣಿಯಲ್ಲಿದೆ. ಕೃಷಿಕರು, ರೈತರಿಗಾಗಿ ರೂಪಿಸಲಾದ ಯೋಜನೆಗಳು ಕರಾರುವಕ್ಕಾಗಿ ಫಲಾನುಭವಿಗಳಿಗೆ ತಲುಪಿದ ಸಮಾಧಾನ ನಮಗಿದೆ. ಯೋಜನೆಗಳ ಅನುಷ್ಠಾನದಲ್ಲಿ ಜಿಲ್ಲೆ ಹಿಂದೆ ಬಿದ್ದಿಲ್ಲ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಕೋವಿಡ್ ಸೋಂಕು ನಿಯಂತ್ರಣದಲ್ಲಿ ಜಿಲ್ಲಾಡಳಿತ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ಎಪಿಎಲ್ ಇರಲಿ, ಬಿಪಿಎಲ್ ಇರಲಿ ಕೋವಿಡ್‌ಗೆ ಖಾಸಗಿ ಆಸ್ಪತ್ರೆಗಳಲ್ಲೂ ಉಚಿತ ಚಿಕಿತ್ಸೆ ಘೋಷಿಸಿದ ಮೊದಲ ಜಿಲ್ಲೆ ದಕ್ಷಿಣ ಕನ್ನಡ. ಅದರಲ್ಲಿದ್ದ ಸಣ್ಣಪುಟ್ಟ ತೊಡಕುಗಳನ್ನು ಇದೀಗ ನಿವಾರಿಸಲಾಗಿದೆ, ಜಿಲ್ಲೆಗೆ ಇದೀಗ 25 ಹೆಚ್ಚುವರಿ ವೆಂಟಿಲೇಟರ್‌ಗಳು ಮತ್ತು 10,000 ರ್‍ಯಾಪಿಡ್ ಟೆಸ್ಟ್ ಕಿಟ್‌ಗಳು ಪೂರೈಕೆ ಆಗಿವೆ ಎಂದು ಸಚಿವರು ವಿವರಿಸಿದರು.
ಬಿಎಸ್‌ವೈ ಸರಕಾರ ವರ್ಷ ಪೂರೈಸಿದ ವರ್ಚುವಲ್ ಸಮಾರಂಭದಲ್ಲಿ ವಿಧಾನ ಸಭಾ ಸದಸ್ಯ ಡಿ.ವೇದವ್ಯಾಸ ಕಾಮತ್, ವಿಧಾನ ಪರಿಷತ್ತು ಸದಸ್ಯ ಪ್ರತಾಪಸಿಂಹ ನಾಯಕ್, ಮಂಗಳೂರು ಮಹಾ ನಗರಪಾಲಿಕೆಯ ಮೇಯರ್ ದಿವಾಕರ ಪಾಂಡೇಶ್ವರ್, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತು ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಕೆ.ಜಗದೀಶ ಪೈ, ಜಿಲ್ಲಾಕಾರಿ ಸಿಂಧು ಬಿ.ರೂಪೇಶ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆರ್.ಸೆಲ್ವಮಣಿ ಮೊದಲಾದವರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss