Saturday, August 13, 2022

Latest Posts

ರಕ್ಷಣಾ ತಂಡಕ್ಕೆ ಊಟ ಬಡಿಸಿ, ತಾವೂ ಉಂಡು ಪ್ರೋತ್ಸಾಹಿಸಿದ ಸಚಿವರು

ತಲಕಾವೇರಿ: ತಲಕಾವೇರಿಯಲ್ಲಿ ಗಜಗಿರಿ ಬೆಟ್ಟ ಕುಸಿತ ಪ್ರದೇಶಕ್ಕೆ ಮಂಗಳವಾರವೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಖುದ್ದು ಭೇಟಿ ನೀಡಿ ಶೋಧ ಕಾರ್ಯಾಚರಣೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿದರಲ್ಲದೆ, ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿರುವ ರಕ್ಷಣಾ ತಂಡಗಳಿಗೆ ಊಟ ಬಡಿಸುವ ಹಾಗೂ ತಾವೂ ಅವರೊಂದಿಗೆ ಊಟ ಮಾಡುವ ಮೂಲಕ ಪ್ರೋತ್ಸಾಹ ನೀಡಿದರು.
ಸತತ 6 ದಿನಗಳಿಂದ ಜಿಲ್ಲೆಯಲ್ಲಿಯೇ ಇರುವ ಸಚಿವರು, ತಲಕಾವೇರಿಯ ಬೆಟ್ಟ ಕುಸಿತ ಪ್ರಕರಣ ಮತ್ತು ಮಳೆ ಹಾನಿ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವ ಮೂಲಕ ರಕ್ಷಣಾ ಕಾರ್ಯಾಚರಣೆ ಮತ್ತು ಪ್ರಕೃತಿ ವಿಕೋಪ ಸಂಬಂಧ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ.
ಈ ಸಂದರ್ಭ ಘಟನಾ ಸ್ಥಳಕ್ಕೆ ತೆರಳಿದ ಸಚಿವರು ಶೋಧ ಕಾರ್ಯ ಸಂಬಂಧಿಸಿದಂತೆ ಅಧಿಕಾರಿಗಳು ಮತ್ತು ಎನ್‍ಡಿಆರ್‍ಎಫ್ ಸಿಬ್ಬಂದಿಗೆ ಅಗತ್ಯ ಮಾರ್ಗದರ್ಶನ ನೀಡಿದರು.
ಭಾಗಮಂಡಲದ ಭಗಂಡೇಶ್ವರ ದೇವಾಲಯಕ್ಕೆ ಶಾಸಕ ಕೆ.ಜಿ.ಬೋಪಯ್ಯ ಅವರೊಂದಿಗೆ ತೆರಳಿದ ಸಚಿವರು ಭಗಂಡೇಶ್ವರನ ದರ್ಶನ ಪಡೆದರು. ಸಂಸದ ಪ್ರತಾಪ್ ಸಿಂಹ ಹಾಗೂ ಸಚಿವರು ಭಾಗಮಂಡಲದ ಹೋಟೆಲ್ ಮಯೂರದಲ್ಲಿ ನಾರಾಯಣಾಚಾರ್ ಅವರ ಪುತ್ರಿಯರೊಂದಿಗೆ ಚರ್ಚಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಯಾಚರಣೆ ಸಂದರ್ಭದಲ್ಲಿ ಹಲವು ಸಲಹೆ, ಮಾರ್ಗದರ್ಶನ ನೀಡಿದರಲ್ಲದೆ, ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿರುವ ರಕ್ಷಣಾ ತಂಡಗಳಿಗೆ ಮಧ್ಯಾಹ್ನ ಊಟ ಬಡಿಸುವ ಮೂಲಕ ಪ್ರೋತ್ಸಾಹ ತುಂಬಿದರು. ಹಾಗೆಯೇ ಸಚಿವರು ಸಹ ಕಾರ್ಯಾಚರಣೆ ತಂಡದೊಂದಿಗೆ ಊಟ ಮಾಡಿದ್ದು, ವಿಶೇಷವಾಗಿತ್ತು.
ಶಾಸಕರಾದ ಕೆ.ಜಿ.ಬೋಪಯ್ಯ, ಸಂಸದ ಪ್ರತಾಪ್ ಸಿಂಹ, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಕ್ಷಮಾ ಮಿಶ್ರಾ ಇತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss