ಮೈಸೂರು: ಭೂಗತಪಾತಕಿ ರವಿ ಪೂಜಾರಿ ನನಗೆ ಮಾತ್ರವಲ್ಲ, ಹಲವು ಶಾಸಕರಿಗೆ ಬೆದರಿಕೆಯನ್ನು ಹಾಕಿದ್ದ ಎಂದು ಮೈಸೂರಿನ ನರಸಿಂಹರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ತನ್ವೀರ್ಸೇಠ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ರವಿ ಪೂಜಾರಿಯಿಂದ ನನಗೆ ಮತ್ತು ಸಾ.ರಾ.ಮಹೇಶ್ಗೆ ಮಾತ್ರವಲ್ಲದೆ, ಇನ್ನು ಸಾಕಷ್ಟು ಶಾಸಕರುಗಳಿಗೆ ಬೆದರಿಕೆ ಇತ್ತು. ನಾನು ಸಾ.ರಾ.ಮಹೇಶ್ ಮಾತ್ರ ಪೊಲೀಸರಿಗೆ ದೂರನ್ನು ನೀಡಿದ್ದೇವೆ. ತನಿಖೆ ನಂತರ ಯಾವೆಲ್ಲ ಶಾಸಕರುಗಳಿಗೆ ಆತನಿಂದ ಬೆದರಿಕೆ ಇತ್ತು ಎಂಬುದು ಬಯಲಾಗುತ್ತೆ. ಸದ್ಯ ಆತನನ್ನು ಬಂಧಿಸಿ ಕರೆ ತಂದಿದ್ದಾರೆ. ಇನ್ನು ಮೇಲೆ ಎಲ್ಲ ವಿಚಾರಗಳು ಬೆಳಕಿಗೆ ಬರಲಿದೆ ಎಂದು ಹೇಳಿದರು.
ತಮ್ಮ ಮೇಲೆ ಕೊಲೆ ಯತ್ನ ಪ್ರಕರಣ ನಡೆದ ಬಗ್ಗೆ ಪ್ರತಿಕ್ರಿಯಿಸಿ, ನನ್ನ ಮೇಲೆ ನಡೆದ ಹಲ್ಲೆ ಪ್ರಕರಣ ಅನಿರೀಕ್ಷಿತ. ಈ ಘಟನೆ ನಡೆಯಬಾರದಿತ್ತು ನಡೆದಿದೆ. ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಅದರ ಪ್ರತಿಯನ್ನು ಪಡೆದುಕೊಂಡಿದ್ದೇನೆ. ತನಿಖೆ ಬಗ್ಗೆ ನನಗೆ ಯಾವುದೇ ತಕರಾರು ಇಲ್ಲ. ಪೊಲೀಸರು ತಮ್ಮ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಹಲ್ಲೆ ಮಾಡಿದವರು ಯಾರು ಎಂಬುದು ಗೊತ್ತಿಲ್ಲ ಎಂದರು.