ರಾಮನಗರ: ನಗರದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣ ಗೊಳ್ಳುತ್ತಿದ್ದು, ಇದರಿಂದಗಿ ನಗರದ ಪ್ರಮುಖ ರಸ್ತೆಗಳು ತಿಪ್ಪೆಗುಂಡಿಗಳಾಗಿ ಮಾರ್ಪಟ್ಟಿದೆ. ಜನತೆ ರಸ್ತೆಯಲ್ಲಿ ತಿರುಗಾಡಲಾಗದ ಪರಿಸ್ಥಿತಿ ನಿರ್ಮಾಣ ಗೊಂಡಿದ್ದು, ನಗರಸಭೆಯ ಕಾರ್ಯ ವೈಕರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಡಂಫಿಂಯಾರ್ಡ್ ಇಲ್ಲ ಎಂಬ ಕಾರಣಕ್ಕೆ ನಗರದಲ್ಲಿ ಪ್ರತಿನಿತ್ಯ ಕಸ ಎತ್ತುವಕಾರ್ಯವನ್ನು ನಗರಸಭೆ ಅಧಿಕಾರಿಗಳು ಮಾಡುತ್ತಿಲ್ಲ. ಇದರಿಂದಾಗಿ ಜನತೆ ಮನೆಯ ಕಸವನ್ನು ರಸ್ತೆ ಬದಿಯಲ್ಲಿ ತಂದು ಸುರಿಯುತ್ತಿದ್ದು, ಪ್ರತಿ ದಿನ ಕಸದ ರಾಶಿ ಹೆಚ್ಚುತ್ತಲೇ ಇದೆ. ನಗರದ ಕೆಲ ರಸ್ತೆಗಳಲ್ಲಿ ರಾಶಿ ರಾಶಿ ಕಸ ಚೆಲ್ಲಾಡುತ್ತಿದ್ದು, ಮಳೆಯಿಂದಾಗಿ ಕಸದ ಮೇಲೆ ಬಿದ್ದ ನೀರು ಕಲುಷಿತ ಗೊಂಡು ರಸ್ತೆಯ ತುಂಬಾ ಹರಿದು ನಿಲ್ಲುತ್ತಿದೆ.
ನಗರದಲ್ಲಿ ಕಸ ತೆಗೆಯಲು ನಗರಸಭೆ ಅಧಿಕಾರಿಗಳು ಮೀನಾಮೇಷ ಏಣಿಸುತ್ತಿದ್ದಾರೆ. ಇದರಿಂದಾಗಿ ರಸ್ತೆಯಲ್ಲಿ ಕಸದ ಗುಂಡಿಗಳು ಬೆಳೆಯುತ್ತಾ ಸಾಗಿದ್ದು, ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದಾಗ ಜೆಸಿಬಿ ತಂದು ಕಸವನ್ನು ತೆಗೆಸುವ ಸಮಸ್ಯೆ ನಿರ್ಮಾಣ ಗೊಂಡಿದೆ. ಅದೂ ಸಂಪೂರ್ಣ ಕಸವನ್ನು ತೆರವು ಗೊಳಿಸದೆ ಬೇಕಾಬಿಟ್ಟಿ ಕಸವನ್ನು ತೆರವುಗೊಳಿಸುತ್ತಿದ್ದು, ಇದರಿಂದಾಗಿ ಕಸದ ಸಮಸ್ಯೆ ಹಾಗೇ ಉಳಿದಿದೆ. ಇನ್ನು ಅರ್ಧಂಬರ್ಧ ಕಸ ತೆಗೆಯುತ್ತಿರುವುದರಿಂದ ಪರಿಸರ ಹಾಗೇ ಗಬ್ಬೆದ್ದು ನಾರುತ್ತಿದ್ದು, ಬೊಂಬೆನಗರಿಯನ್ನು ಗಾರ್ಬೇಜ್ ಗಬ್ಬು ಸುತ್ತು ವರಿದಿದೆ.