ಮಂಡ್ಯ : ಮೈಷುಗರ್ ವಿಚಾರದಲ್ಲಿ ಕೆಲವರು ರಾಜಕಾರಣ ಮಾಡುತ್ತಾ ಕಾರ್ಖಾನೆ ಆರಂಭಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಬೇಸರ ವ್ಯಕ್ತಪಡಿಸಿದರು.
ಶನಿವಾರ ನಗರದ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಪ್ರಸಕ್ತ ಸಾಲಿನಿಂದಲೇ ಮೈಷುಗರ್ ಕಾರ್ಯಾರಂಭಕ್ಕೆ ಸ್ವತಃ ಸಿಎಂ ಯಡಿಯೂರಪ್ಪನವೇ ಆಸಕ್ತಿ ವಹಿಸಿದ್ದಾರೆ. ಈ ವಿಚಾರವಾಗಿ ಅಧಿಕಾರಿಗಳಿಗೆ ಸೂಚನೆ ನೀಡಿ ಅನುದಾನ ಬಿಡುಗಡೆ ಮಾಡಿದ್ದಾರೆ. ಆದರೆ, ಕೆಲವರ ಪಿತೂರಿಯಿಂದ ಆರಂಭಕ್ಕೆ ವಿಘ್ನಗಳು ಕಾಡಲಾರಂಭಿಸಿವೆ ಎಂದು ತಿಳಿಸಿದರು.
ಕಾರ್ಖಾನೆ ಒ ಅಂಡ್ ಎಂ ಆಧಾರದ ಮೇಲೆ ಶೀಘ್ರ ಆರಂಭವಾಗಲಿದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ. ಕಾರ್ಖಾನೆಯಲ್ಲಿರುವ ಕಾರ್ಮಿಕರಿಗೆ ವಿಆರ್ಎಸ್ ಜಾರಿಗೊಳಿಸಿದ್ದು, ಈಗಾಗಲೇ 25 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ. ಶೇ.75ರಷ್ಟು ಕಾರ್ಮಿಕರು ಸಹಮತ ವ್ಯಕ್ತಪಡಿಸಿದ್ದರೆ, ಶೇ.25ರಷ್ಟು ನೌಕರರು ಮನೆ ಸೇರಿದಂತೆ ಇತರೆ ಸೌಲಭ್ಯ ಕಲ್ಪಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಇದರ ಹಿಂದೆ ಕೆಲವು ರಾಜಕೀಯ ಶಕ್ತಿಗಳು ಇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೈಷುಗರ್ ಒ ಅಂಡ್ ಎಂ ನಿಯೋಜನೆಗೆ ಈಗಾಗಲೇ ಇಬ್ಬರು ತಜ್ಞರನ್ನು ನೇಮಕ ಮಾಡಿದೆ. ಯಾವ ರೀತಿ ಕಾರ್ಯನಿರ್ವಹಣೆ ಮಾಡಬೇಕು, ಸಕ್ಕರೆ ಮಾರಾಟ ಹೇಗೆ ಎಂಬ ಕುರಿತು ಸಲಹೆ-ಸೂಚನೆಗಳನ್ನು ನೀಡಲಾಗಿದೆ. ಜು.22ರಂದು ಈ ಸಂಬಂಧ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.