ಹೊಸ ದಿಗಂತ ವರದಿ, ಚಿತ್ರದುರ್ಗ:
ಕೃಷಿ ಕ್ಷೇತ್ರದ ಹಿತದೃಷ್ಠಿಯಿಂದ ಕೇಂದ್ರ ಸರ್ಕಾರ ರೂಪಿಸಿರುವ ಮೂರು ಕಾಯಿದೆಗಳನ್ನು ಒಂದೂವರೆ ವರ್ಷ ಕಾಲ
ತಡೆಹಿಡಿಯುವುದಾಗಿ ಹೇಳಿದೆ. ರೈತ ಮುಖಂಡರೊಂದಿಗೆ ವಿವಿಧ ಹಂತದ ಮಾತುಕತೆ ನಡೆಸಿದ್ದಾಗ್ಯೂ ರೈತರು ಹೋರಾಟ ನಡೆಸುತ್ತಿರುವುದನ್ನು ನೋಡಿದರೆ ರೈತರ ಹೋರಾಟ ರಾಜಕೀಯ ಹೋರಾಟವಾಗಿ ಪರಿಣಮಿಸಿದೆ ಎನಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ವಿಷಾದ ವ್ಯಕ್ತಪಡಿಸಿದರು.
ನಗರದ ಹೊರವಲಯದ ಮಾಳಪ್ಪನಹಟ್ಟಿಯ ತಿರುಮಲ ಕಲ್ಯಾಣ ಮಂಟಪದಲ್ಲಿ ರಾಜ್ಯ ಬಿಜೆಪಿಯಿಂದ ಶನಿವಾರ ಹಮ್ಮಿಕೊಂಡಿದ್ದ ವಿಭಾಗಗಳ ಸಭೆಯಲ್ಲಿ ಭಾಗವಹಿಸುವ ಮೊದಲು ಸುದ್ದಿಗಾರರ ಜೊತೆ ಅವರು ಮಾತನಾಡಿದರು.
ಕೃಷಿ ಸಚಿವರು ಸೇರಿದಂತೆ ಕೇಂದ್ರ ಸರ್ಕಾರದ ಕೆಲವು ಮಂತ್ರಿಗಳು ಕಾಯಿದೆಗಳ ಕುರಿತು ರೈತ ಮುಖಂಡ ಮಾತುಕತೆ ನಡೆಸಿದ್ದಾರೆ. ಕೇಂದ್ರ ಸರಕಾರ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುವ ಮೂಲಕ ರೈತ ನಾಯಕರ ಮನವೊಲಿಸಿದ್ದಾರೆ. ಇಂದು ಮತ್ತೆ ಪ್ರಧಾನ ಮಂತ್ರಿಯವರು ರೈತ ನಾಯಕರನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ. ಈ ಹಿಂದೆ ಕೃಷಿ ಸಚಿವರು ಪ್ರಯತ್ನ ಮಾಡಿದ್ದಾರೆ. ಅದರ ಮೇಲೆಯೂ ಹೋರಾಟಗಳನ್ನು ಮಾಡುತ್ತೇವೆ ಎನ್ನುವುದು ಇದೊಂದು ರಾಜಕೀಯ ಹೋರಾಟ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದರು.
ಎಡಪಕ್ಷಗಳು, ಕಾಂಗ್ರೆಸ್, ವಿರೋಧ ಪಕ್ಷಗಳು ಎಲ್ಲರೂ ಸೇರಿ ಹೋರಾಟ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವ ರೀತಿಯಲ್ಲಿ ಸಂಧಾನಕ್ಕೆ ಕರೆದಾಗ ಬಂದು ಸಂಧಾನದ ಮಾತುಕತೆಗಳು ಮಾಡುವುದು ಒಂದು ಕ್ರಮ. ಆದರೆ ಮಾತುಕತೆಯ ಆಹ್ವಾನಕ್ಕೂ ಕಿವಿಗೊಡದೆ, ಅದನ್ನು ಮೀರಿ ರೈತರ ಹೆಸರಿನಲ್ಲಿ ರಾಜಕೀಯ ಮಾಡುವ ಕೆಲಸ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಈಗ ಎಲ್ಲಾ ಜನಾಂಗದವರು ಮೀಸಲಾತಿ ಕೇಳುತ್ತಿದ್ದಾರೆ. ಸರ್ಕಾರ ತನ್ನದೇ ರೀತಿಯಲ್ಲಿ ಯೋಚನೆ ಮಾಡುತ್ತಿದೆ. ಈ ಬಗ್ಗೆ ನಿನ್ನೆ ಮುಖ್ಯಮಂತ್ರಿ ಅವರು ಯೋಚನೆ ಮಾಡಿದ್ದಾರೆ. ಮುಂದೆ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ. ನಮ್ಮ ಪಕ್ಷದ ಯಾವ ಶಾಸಕರೂ ಮುಖ್ಯಮಂತ್ರಿ ವಿರುದ್ದ ತಿರುಗಿಬಿದ್ದಿಲ್ಲ. ಅವರ ಸಮಸ್ಯೆಗಳನ್ನು ಕೇಳುತ್ತಿದ್ದಾರೆ ಅಷ್ಟೆ, ಅವುಗಳನ್ನು ಬಗೆಹರಿಸುವ ಪ್ರಯತ್ನ ಕೂಡ ಸಿಎಂ ಮಾಡುತ್ತಿದ್ದಾರೆ ಸುದ್ದಿಗಾರರ ಪ್ರಶ್ನಯೊಂದಕ್ಕೆ ಪ್ರತಿಕ್ರಿಯಿಸಿದರು.
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ದಿನಕ್ಕೊಂದು ಮಾತುಗಳನ್ನು ಹೇಳುತ್ತಿದ್ದಾರೆ. ದಿನಕ್ಕೊಂದು ಕನಸು ಕಾಣುತ್ತಾರೆ. ರಾಜಕಾರಣದಲ್ಲಿ ಕನಸು ಕಾಣುವುದು ಸಹಜ. ಅವರ ಎಲ್ಲಾ ಹೇಳಿಕೆಗಳನ್ನು ಮೊನ್ನೆ ಕೇಂದ್ರದ ಶಿಸ್ತು ಸಮಿತಿ ಗಮನಕ್ಕೆ ತರಲಾಗಿದೆ. ಅವುಗಳನ್ನು ಆಧರಿಸಿ ಕೇಂದ್ರ ಶಿಸ್ತು ಕ್ರಮ ಜರುಗಿಸಲಿದೆ ಎಂದರು.