ಹೊಸದಿಲ್ಲಿ:ರಾಜಧಾನಿ ದಿಲ್ಲಿಯಲ್ಲಿ ರಾಜಕೀಯ ಭಿನ್ನಾಭಿಪ್ರಾಯ ಮರೆತು ಕೊರೋನಾ ಪಿಡುಗನ್ನು ಸೋಲಿಸಲು ಒಂದಾಗುವಂತೆ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ದಿಲ್ಲಿಯ ರಾಜಕೀಯ ಪಕ್ಷಗಳಿಗೆ ಕರೆ ನೀಡಿದ್ದಾರೆ.
ಅವರು ಸೋಮವಾರ ಇಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ರಾಜಧಾನಿ ದಿಲ್ಲಿಯಲ್ಲಿ ಕೊರೋನಾ ಸೋಂಕು ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾರ್ಗದರ್ಶನ ಮಾಡಿದರು. ಈ ಸಭೆಯಲ್ಲಿ ಬಿಜೆಪಿ , ಆಮ್ ಆದ್ಮಿ, ಕಾಂಗ್ರೆಸ್, ಬಿಎಸ್ಪಿ ಪಕ್ಷಗಳ ನಾಯಕರು ಪಾಲ್ಗೊಂಡಿದ್ದರು. ರಾಜಕೀಯ ಪಕ್ಷಗಳು ರಾಜಕೀಯ ಮರೆತು ತಮ್ಮ ಕಾರ್ಯಕರ್ತರನ್ನು ದಿಲ್ಲಿ ಸರಕಾರದ ಕೋವಿಡ್-೧೯ರ ಮಾರ್ಗಸೂಚಿಯ ಜಾರಿಗಾಗಿ ತೊಡಗಿಸಿಕೊಳ್ಳಬೇಕೆಂದು ಅವರು ಕರೆ ನೀಡಿದರು.
ಜನತೆಯ ವಿಶ್ವಾಸ ಗಳಿಸಿ ದಿಲ್ಲಿಯ ಕೋವಿಡ್ ಪಿಡುಗಿನ ಆತಂಕದ ಸ್ಥಿತಿಯನ್ನು ಶೀಘ್ರವೇ ಸುಧಾರಣೆಗೊಳ್ಳುವಂತೆ ಮಾಡುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.ಈಗಾಗಲೇ ಅಮಿತ್ ಶಾ ಅವರು ದಿಲ್ಲಿ ಸರಕಾರಕ್ಕೆ ನೆರವಾಗುವ ನಿಟ್ಟಿನಲ್ಲಿ ೫೦೦ರೈಲ್ವೇ ಕೋಚ್ಗಳ ಮೂಲಕ ೮೦೦೦ಐಸೋಲೇಶನ್ ಬೆಡ್ಗಳ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದಾರೆ. ಅಲ್ಲದೆ ಕೋವಿಡ್-೧೯ಪರೀಕ್ಷೆಗಳನ್ನು ಮುಪ್ಪಟ್ಟುಗೊಳಿಸಲು ಎಲ್ಲ ನೆರವು ನೀಡುವುದಾಗಿಯೂ ಪ್ರಕಟಿಸಿದ್ದಾರೆ. ದಿಲ್ಲಿಯಲ್ಲಿ ಭಾನುವಾರ ಒಂದೇ ದಿನ ೨,೨೨೪ಸೋಂಕು ಪ್ರಕರಣಗಳು ಪತ್ತೆಯಾಗಿ ಆತಂಕಕ್ಕೆ ಕಾರಣವಾಗಿದ್ದು, ಈಗಾಗಲೇ ಒಟ್ಟು ಪ್ರಕರಣಗಳ ಸಂಖ್ಯೆ ೪೧,೦೦೦ಕ್ಕೇರಿ ಸಾವಿಗೀಡಾದವರ ಸಂಖ್ಯೆ ೧,೩೦೦ಕ್ಕೇರಿದೆ.