ಉಡುಪಿ: ರಾಜರಾಜೇಶ್ವರಿ ನಗರದ ಉಪಚುನಾವಣೆಯಲ್ಲಿ ಡಿ.ಕೆ. ರವಿ ಹೆಸರನ್ನು ಯಾರು ಬಳಸಿಕೊಂಡರೂ ಅವರಿಗೆ ಒಳ್ಳೆದಾಗುವುದಿಲ್ಲ. ರವಿ ವಿಚಾರ ಚರ್ಚೆಯ ವಿಷಯವೇ ಅಲ್ಲ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಆರ್.ಆರ್. ನಗರ ಉಪಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಡಿ.ಕೆ. ರವಿ ಪತ್ನಿ ಕುಸುಮಾ ಸ್ಪರ್ಧೆ ವಿಚಾರವಾಗಿ ಅವರು ಪ್ರತಿಕ್ರಿಯಿಸಿದರು.
ಡಿ.ಕೆ. ರವಿ ಓರ್ವ ದಕ್ಷ ಅಧಿಕಾರಿಯಾಗಿದ್ದರು, ಅವರಿಂದು ನಮ್ಮ ಜೊತೆಗಿಲ್ಲ. ಅವರು ಬದುಕಿದ್ದಾಗ ಕುಸುಮಾ ಕುಟುಂಬ ಏನು ಮಾಡಿತ್ತು ಡಿ.ಕೆ.ರವಿ ಅವರ ಮಾವ ಏನು ಮಾಡಿದ್ದರು? ರವಿ ಮೃತಪಟ್ಟ ತಕ್ಷಣ ಕುಸುಮಾ ಅವರು ಎಲ್ಲಿಗೆ ಹೋದರು? ಯಾಕೆ ಹೋದರು? ಇದೆಲ್ಲವೂ ಚರ್ಚೆಯಾಗುತ್ತದೆ ಎಂದರು.
ರವಿ ಸಾವಿನಿಂದ ಅವರ ತಂದೆ ತಾಯಿಗೆ ಆದ ಅವಮಾನ, ಅವರ ಕೆಟ್ಟ ಪರಿಸ್ಥಿತಿ ಎಲ್ಲವೂ ಚರ್ಚೆಯ ವಿಷಯವಾಗಿದೆ. ಚುನಾವಣಾ ವಿಷಯದಲ್ಲಿ ಇದೆಲ್ಲ ಪ್ರಸ್ತಾಪ ಆಗುವುದು ಒಳ್ಳೆಯದಲ್ಲ ಎಂದ ಶೋಭಾ ಕರಂದ್ಲಾಜೆ, ಒಂದು ವೇಳೆ ಕುಸುಮಾ ಚರ್ಚೆಗೆ ತೆಗೆದರೆ ನಮ್ಮಲ್ಲೂ ಚರ್ಚೆಗೆ ಸಾಕಷ್ಟು ವಿಚಾರಗಳಿವೆ ಎಂದು ಎಚ್ಚರಿಸಿದರು.