ಶಿವಮೊಗ್ಗ: ರಾಜರಾಜೇಶ್ವರಿ ನಗರ, ಶಿರಾ ಉಪ ಚುನಾವಣೆ ಮಾತ್ರ ಯಾಕೆ, ಮುಂಬರುವ ಎಲ್ಲಾ ಚುನಾವಣೆಯಲ್ಲೂ ನಮ್ಮದೇ ಗೆಲುವು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.
ಭಾನುವಾರ ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಪ್ರಪಂಚ ಮೆಚ್ಚುವಂತಹ ಆಡಳಿತವನ್ನು ನಡೆಸುತ್ತಿದ್ದಾರೆ. ಅವರ ಸಾರಥ್ಯದಲ್ಲಿ ದೇಶ ಜಗತ್ತಿನಲ್ಲಿಯೇ ಬಲಿಷ್ಠವಾಗುತ್ತಿದೆ ಎಂದರು.
ಕರ್ನಾಟಕದಾದ್ಯಂತ ಪ್ರವಾಸ ಮಾಡಿ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ನ. 17ರಿಂದ ರಾಜ್ಯದಲ್ಲಿ ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಕಾಲೇಜುಗಳನ್ನು ಆರಂಭವಾಗುತ್ತಿದ್ದು, ಯಾರಿಗೆ ಆಸಕ್ತಿ ಇದೆಯೋ ಅವರು ಕಾಲೇಜಿಗೆ ಬರಬಹುದು, ಉಳಿದವರಿಗೆ ಆನ್ ಲೈನ್ ನಲ್ಲಿಯೂ ತರಗತಿ ಕೇಳಬಹುದು. ರಾಜ್ಯದಲ್ಲಿ ಹಿಂದೆಂದೂ ಕಾಣದಂತಹ ಪ್ರವಾಹ ಈಬಾರಿ ಬಂದಿದೆ. ಬೆಂಗಳೂರಿನಲ್ಲಿಯೂ ಭಾರಿ ಮಳೆಯಾಗಿ ಮನೆಗಳು ಜಲಾವೃತವಾಗಿವೆ. ನಾನು 600ಕ್ಕೂ ಹೆಚ್ಚು ಮನೆಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಸಂತ್ರಸ್ತ ಮನೆ ಮಂದಿಗೆ 25 ಸಾವಿರ ಪರಿಹಾರ ನೀಡಲು ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದರು.