ಮೈಸೂರು: ಮೈಸೂರು ಸಂಸ್ಥಾನವನ್ನು ಆಳಿದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮ ದಿನಾಚರಣೆಯನ್ನು ಮೈಸೂರಿನ ಅರಮನೆಯಲ್ಲಿ ಗುರುವಾರ ಸರಳವಾಗಿ ಆಚರಿಸಲಾಯಿತು.
ಮೈಸೂರಿನ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ರಾಜವಂಶಸ್ಥ ಜಯಂತಿ ಆಚರಿಸಿದರು.
ಈ ವೇಳೆ ಮಾತನಾಡಿದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತವನ್ನು ಮೈಸೂರಿನ ಸುವರ್ಣಯುಗ ಎಂದು ಸ್ಮರಿಸುತ್ತೇವೆ ಅದನ್ನು ಪುನಃ ನಾವು ಕಾಣಬೇಕೆಂಬ ಇಚ್ಛೆಯಿದೆ ಎಂದರು.
ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿಡಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ, ಹೆಸರಿಟ್ಟರೆ ಅದನ್ನು ಜನ ಮರೆತು ಹೋಗ್ತಾರೆ. ಅವರು ನೀಡಿದ ಒಳ್ಳೆಯ ಆಡಳಿತದ ದಿನ ಗಳನ್ನು ಸ್ಮರಣೆ ಮಾಡಿದರೆ ಒಳ್ಳೆಯದು. ಅದು ಆಡಳಿತಕ್ಕೆ ನೀಡಿದ ಗೌರವಾಗಲಿದೆ. ಹೆಸರು ನೀಡುವುದಕ್ಕಿಂತ ಅವರ ಕಾಲದ ಆಡಳಿತವನ್ನು ಅನುಸರಿಸಬೇಕು ಎಂದರು.
ಕೆ.ಆರ್.ಎಸ್ ನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ನಿರ್ಮಾಣ ಕುರಿತು ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರ ಅಭಿಪ್ರಾಯ, ಹೇಳಿಕೆಗೆ ನನ್ನ ಸಹಮತ ಇದೆ ಎಂದರು.
ಕೊರೋನಾ ಸೋಂಕು ಹರಡುವಿಕೆಯಿಂದಾಗಿ ಜಗತ್ತಿನಲ್ಲಿ ಸಾಂಕ್ರಾಮಿಕ ರೋಗದ ಪರಿಸ್ಥಿತಿ ಉಂಟಾಗಿದೆ. ಇಂತಹ ರೋಗ ಬರುತ್ತಾ ಇರುತ್ತದೆ. ಇತಿಹಾಸದಲ್ಲಿ ನೋಡಿದರೆ, ಇಂತಹ ನೋವುಗಳು ಒಂದು ಶತಮಾನ ಆಗಿದೆ. ಅಷ್ಟು ಬೇಗ ಹೋಗಲ್ಲ. ನಾವು ಈ ಕೊರೋನಾ ವೇಳೆ ಜಯಗಳಿಸಲು ಲಾಕ್ ಡೌನ್ನಲ್ಲಿ ಏನೇನು ಹೊಸ ಪದ್ಧತಿಗಳನ್ನು ಆರಂಭಿಸಿದ್ದೇವೆಯೋ ಅದನ್ನು ಮುಂದೆಯೂ ಅನುಸರಿಸುವುದು ಸೂಕ್ತ, ಹಾಗಿದ್ದರೆ ಜಯಗಳಿಸಬಹುದು ಎಂದು ತಿಳಿಸಿದರು.