ಬೆಂಗಳೂರು: ಕೊರೋನಾ ನಿಯಂತ್ರಣ ಹಿನ್ನೆಲೆಯಲ್ಲಿ ಮತ್ತೆ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಲಾಕ್ಡೌನ್ ಜಾರಿ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಕೋವಿಡ್-19 ಸೋಂಕು ನಿಯಂತ್ರಣ ಕುರಿತಂತೆ ಮಹತ್ವದ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ಡೌನ್ ಜಾರಿ ಇಲ್ಲವಾದರೂ, ಜನರಲ್ಲಿ ಮಾಸ್ಕ್ ಧರಿಸುವ ಕುರಿತು ಮತ್ತಷ್ಟು ಜನಜಾಗೃತಿ ಮೂಡಿಸುವ ಉದ್ದೇಶದಿಂದ ಇದೇ ಗುರುವಾರ ಮಾಸ್ಕ್ ಡೇ ಆಚರಿಸಲಾಗುವುದು. ಅಂದು ವಿಧಾನಸೌಧದಿಂದ ಬೆಳಿಗ್ಗೆ 8.30 ಗಂಟೆಗೆ ಮಾಸ್ಕ್ ಧರಿಸಿ 1 ಕಿ.ಮೀ. ವಾಕ್ ಮಾಡುವ ಮೂಲಕ ಮಾಸ್ಕ್ ಮಹತ್ವ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಈ ಕಾರ್ಯಕ್ರಮ ರಾಜ್ಯಾದ್ಯಂತ ಪಂಚಾಯತ್ ಮಟ್ಟದಲ್ಲಿಯೂ ಆಚರಿಸಲಾಗುವುದು ಎಂದು ಅವರು ಹೇಳಿದರು.
ಕೊರೋನಾ ವಿರುದ್ಧ ಸಂಘಟಿತ ಹೋರಾಟ ಅಗತ್ಯ. ಚಿತ್ರ ನಟರು, ಗಣ್ಯರು, ಮಾಸ್ಕ್ ಧರಿಸುವ ಮತ್ತು ವ್ಯಕ್ತಿಗತ ಅಂತರ ಕಾಪಾಡಿಕೊಳ್ಳುವ ಕುರಿತು ಜನಜಾಗೃತಿ ಮೂಡಿಸಬೇಕು ಎಂದ ಅವರು ಮಾಸ್ಕ್ ಧರಿಸದಿದ್ದರೆ 200 ರೂಪಾಯಿ ದಂಡ ವಿಧಿಸಲಾಗುವುದು. ಈ ಸಂಬಂಧ ಕಟ್ಟುನಿಟ್ಟಿನ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಯಡಿಯೂರಪ್ಪ ಹೇಳಿದರು.