Saturday, August 13, 2022

Latest Posts

ರಾಜ್ಯದಲ್ಲಿ ಇಬ್ಬರು ಸಿಎಂ: ಸಿದ್ದರಾಮಯ್ಯರದ್ದು ರಾಜಕೀಯ ಹೇಳಿಕೆ: ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು: ಮುಖ್ಯಮಂತ್ರಿಗಳ ಪುತ್ರ ಬಿ.ವೈ.ವಿಜಯೇಂದ್ರ ಅವರು ಸೂಪರ್ ಸಿಎಂ ರೀತಿ ವರ್ತಿಸಿಲ್ಲ. ಅವರು ಯಾವುದೇ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಅಧಿಕಾರ ವಹಿಸಿಕೊಂಡು 3 ತಿಂಗಳು ಕಳೆದಿದೆ. ಆದರೆ ನನಗೆ ಈವರೆಗೂ ಅಂತಹ ಯಾವುದೇ ಸನ್ನಿವೇಶ ಎದುರಾಗಿಲ್ಲ. ಅಲ್ಲದೆ, ನನಗೆ ತಿಳಿದ ಮಟ್ಟಿಗೆ ನನ್ನ ಸಹೋದ್ಯೋಗಿ ಸ್ನೇಹಿತರಿಗೂ ಅಂತಹ ಅನುಭವ ಆಗಿರುವುದು ನನ್ನ ಗಮನಕ್ಕೆ ಬಂದಿಲ್ಲ ಎಂದು ಸಚಿವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಸಿದ್ದರಾಮಯ್ಯ ಅವರು ಈಗ ರಾಜಕೀಯ ಉದ್ದೇಶಕ್ಕಾಗಿ ಇಂತಹ ಹೇಳಿಕೆ ನೀಡುತ್ತಿದ್ದರೆಯೇ ಹೊರತು ಆರೋಪದಲ್ಲಿ ಹುರುಳಿಲ್ಲ. ಇನ್ನು ಯಾವ ವರ್ಗಾವಣೆ ವಿಷಯಕ್ಕೂ ವಿಜಯೇಂದ್ರ ಅವರು ಹಸ್ತಕ್ಷೇಪ ಮಾಡಿಲ್ಲ. ಅಲ್ಲದೆ, ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಹೇಳಿಕೊಳ್ಳಲು ಬರುವ ಶಾಸಕರು ಇಲ್ಲವೇ ಸಚಿವರಿಗೆ ವಿಜಯೇಂದ್ರ ಅವರನ್ನು ಭೇಟಿ ಮಾಡಿ ಚರ್ಚಿಸುವಂತೆ ಮುಖ್ಯಮಂತ್ರಿಗಳು ಇವತ್ತಿನವರೆಗೂ ಹೇಳಿರುವುದು ನನ್ನ ಗಮನಕ್ಕಂತೂ ಬಂದಿಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಿಎಂ ಹುದ್ದೆ ಖಾಲಿ ಇಲ್ಲ: ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಗಳಾಗುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಮುಖ್ಯಮಂತ್ರಿಗಳ ಹುದ್ದೆ ಖಾಲಿ ಇಲ್ಲ. ಬಿ.ಎಸ್.ಯಡಿಯೂರಪ್ಪ ಅವರು
3 ವರ್ಷ ಆಡಳಿತ ನಡೆಸಲಿದ್ದಾರೆ. ಸರ್ಕಾರಕ್ಕೆ ಯಾವುದೇ ರೀತಿಯ ಸಮಸ್ಯೆ ಇಲ್ಲ. ಸುಮ್ಮನೆ ಕೆಲವರು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ತಿಳಿಸಿದರು.

ಮುಖ್ಯಮಂತ್ರಿಗಳು ಮಾತು ತಪ್ಪಿಲ್ಲ: ಮುಖ್ಯಮಂತ್ರಿಗಳು ಎಂದೂ ಮಾತು ತಪ್ಪದವರು. ನಮಗೆ ಮಾತು ಕೊಟ್ಟಂತೆ ನಡೆದುಕೊಂಡಿದ್ದಾರೆ. ಇನ್ನು ಬಿಜೆಪಿ ಶಿಸ್ತಿನ ಪಕ್ಷ. ಇಲ್ಲಿ ಎಲ್ಲೂ ಅಸಮಾಧಾನ ಇಲ್ಲ. ವಿಧಾನಪರಿಷತ್ ಸದಸ್ಯ ಸ್ಥಾನದ ಬಗ್ಗೆ ಯಾರೂ ಲಾಬಿ ನಡೆಸುತ್ತಿಲ್ಲ.
ಮೈಸೂರು ಸೇರಿದಂತೆ ಆಯಾ ಭಾಗದ ಮುಖಂಡರು, ಆಕಾಂಕ್ಷಿಗಳು ಅಲ್ಲಿನ ಸಚುವರು, ಸಂಸದರು ಹಾಗೂ ಶಾಸಕರಲ್ಲಿ ಚರ್ಚೆ ಮಾಡುವುದು ಸಹಜ. ಇದನ್ನೇ ಲಾಬಿ ಎನ್ನಲಾಗದು ಎಂದು ತಿಳಿಸಿದರು.

ಮಾಜಿ ಸಚಿವ ಎಚ್. ವಿಶ್ವನಾಥ್ ಮಾತ್ರವಲ್ಲ, ಆರ್.ಶಂಕರ್, ಎಂಟಿಬಿ ನಾಗರಾಜ್, ಪ್ರತಾಪ್ ಗೌಡ ಪಾಟೀಲ್ ಎಲ್ಲರೂ ಪರಿಷತ್ತಿನ ಆಕಾಂಕ್ಷಿತರಿದ್ದು, ಇವರೆಲ್ಲರಿಗೂ ಸ್ಥಾನ ನೀಡುವಂತೆ ನಾವು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ. ಅವರು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.

ಕೋವಿಡ್ ಬಗ್ಗೆ ಭಯ ಬೇಡ: ಕೋವಿಡ್ ಪ್ರಕರಣಗಳು ಜಿಲ್ಲೆಯಲ್ಲಿ ಈಗಾಗಲೇ ನಿಯಂತ್ರಣಕ್ಕೆ ಬಂದಿದೆ. ಆದರೆ, ಮುಂಬೈ ಸೇರಿದಂತೆ ಹೊರ ರಾಜ್ಯದಿಂದ ಬಂದವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಜೊತೆಗೆ ಇವರೆಲ್ಲರ ಪರೀಕ್ಷೆಗೆ ಕ್ರಮ ಕೈಗೊಳ್ಳಲಾಗಿದೆ. ಎಲ್ಲರನ್ನೂ ಕ್ವಾರಂಟೇನ್ ಮಾಡಲಾಗಿದ್ದು, ಯಾರೂ ಭಯಪಡುವುದು ಬೇಡ ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss