ಸೋಮವಾರಪೇಟೆ: ರಾಜ್ಯದಲ್ಲಿ ಸುಮಾರು 2ಸಾವಿರ ವೈದ್ಯರನ್ನು ನೇಮಕ ಮಾಡಲು ಸರಕಾರದ ಮಟ್ಟದಲ್ಲಿ ಪ್ರಕ್ರಿಯೆ ಮುಗಿದಿದ್ದು, ಆಗಸ್ಟ್ ತಿಂಗಳಲ್ಲಿ ವೈದ್ಯರ ನೇಮಕವಾಗಲಿದೆ. ಈ ಸಂದರ್ಭ ಜಿಲ್ಲೆಗೆ ಅಗತ್ಯವಿರುವ ವೈದ್ಯರನ್ನು ನೇಮಕ ಮಾಡಲಾಗುವುದು ಎಂದು ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.
ಸರ್ಕಾರದ ವತಿಯಿಂದ ಪಟ್ಟಣ ಹಾಗೂ ಅಂಕನಹಳ್ಳಿಯಲ್ಲಿ ನಿರ್ಮಾಣವಾಗಿರುವ 55.80 ಲಕ್ಷ ರೂ. ವೆಚ್ಚದ ಪಶುವೈದ್ಯಕೀಯ ಆಸ್ಪತ್ರೆಗಳ ನೂತನ ಕಟ್ಟಡವನ್ನು ಉದ್ಘಾಟಿಸಿ, ಪಟ್ಟಣದ ಪಶುವೈದ್ಯಕೀಯ ಆಸ್ಪತ್ರೆಯ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಟ್ಟಣದ ಪಶುವೈದ್ಯಕೀಯ ಆಸ್ಪತ್ರೆ ಹಾಗೂ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಹೆಚ್ಚಿನ ಆಸಕ್ತಿ ವಹಿಸುವುದಾಗಿ ತಿಳಿಸಿದ ಅವರು, ಜಿಲ್ಲೆಗೆ ಅವಶ್ಯವಿರುವ ವೈದ್ಯರ ನೇಮಕ ಮಾಡಲಾಗುವುದು. ಗ್ರಾಮೀಣ ಭಾಗದಿಂದ ಬಂದ ವೈದ್ಯರು ಗ್ರಾಮೀಣ ಭಾಗದಲ್ಲಿ ಕೆಲಸ ಮಾಡಲು ಹಿಂದೇಟು ಹಾಕುತ್ತಿರುವುದು ದುರಂತ. ಜಿಲ್ಲೆಯಲ್ಲಿ ಕೆಲಸ ಮಾಡುವ ವೈದ್ಯರಿಗೆ 80ಸಾವಿರ ಸಂಬಳ ನೀಡಲಾಗುವುದು. ಆಸಕ್ತರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಬಹುದು ಎಂದು ಹೇಳಿದರು.
ಮನುಷ್ಯನ ಆರೋಗ್ಯದಂತೆ ಪಶು ಪ್ರಾಣಿಗಳ ಆರೋಗ್ಯವು ಬಹುಮುಖ್ಯವಾದುದು.
ಪಶು ಆಸ್ಪತ್ರೆಗಳು ರೈತರ ಬೆನ್ನುಲುಬು ಇದ್ದಂತೆ, ಪಶುಪಾಲನೆ ಕೃಷಿ ಚಟುವಟಿಕೆ ಹಾಗೂ ಹೈನುಗಾರಿಕೆಗೆ ಪೂರಕವಾದದ್ದು. ಜೀವನ ನಿರ್ವಹಣೆಗೆ ಹೈನುಗಾರಿಕೆ ಮೂಲಕ ಹೆಚ್ಚಿನ ಆದಾಯವನ್ನು ಕೃಷಿಕರು ಪಡೆಯಲು ಅನುಕೂಲವಾಗಿದೆ ಎಂದು ಅವರು ತಿಳಿಸಿದರು.
ಸಂಪರ್ಕ ತಡೆ ಕಡ್ಡಾಯ: ರಾಜ್ಯದಲ್ಲೇ ಕಡಿಮೆ ಕೊರೋನಾ ಸೋಂಕಿತರನ್ನು ಹೊಂದಿರುವ ಜಿಲ್ಲೆ ಕೊಡಗು. ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ವೈರಸ್ ಬಗ್ಗೆ ಆತಂಕ ಬೇಡ. ಎಚ್ಚರಿಕೆ ಹಾಗೂ ಧೈರ್ಯದಿಂದ ಸೋಂಕು ಗೆಲ್ಲಬಹುದು. ಬೆಂಗಳೂರಿನಿಂದ ಜಿಲ್ಲೆಗೆ ಬರುವವರಿಗೆ 15 ದಿನಗಳ ಕಾಲ ಕಡ್ಡಾಯ ಕ್ವಾರಂಟೈನ್ ಮಾಡಲೇಬೇಕು ಎಂದು ಹೇಳಿದರು.
ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯಲ್ಲಿ ಶಾಸಕರುಗಳ ಸೇವೆ ಗಣನೀಯವಾಗಿದೆ ಎಂದು ಸ್ಮರಿಸಿದ ಅವರು, ಮೆಡಿಕಲ್, ಇಂಜಿನಿಯರಿಂಗ್ ಕಾಲೇಜು, ಚಿಕ್ಕಅಳವಾರದಲ್ಲಿ ಸ್ನಾತ್ತಕೋತ್ತರ ಕೇಂದ್ರ, ಮಡಿಕೇರಿಯಲ್ಲಿ 450 ಬೆಡ್ಗಳ ಸುಸಜ್ಜಿತ ಆಸ್ಪತ್ರೆ ಹಾಗೂ ಪ್ರಕೃತಿ ವಿಕೋಪ ಸಂತ್ರಸ್ತ ಫಲಾನುಭವಿಗಳಿಗೆ ನಿರ್ಮಿಸಿಕೊಟ್ಟಿರುವ ಮನೆಗಳು ಇವೆಲ್ಲಾ ಸಾಧನೆಗಳ ಹಿಂದೆ ಬಿಜೆಪಿ ಶಾಸಕರುಗಳಿದ್ದಾರೆ ಎಂದರು.
ಸೋಮವಾರಪೇಟೆಯಲ್ಲಿ ಸರ್ಕಾರಿ ಕಾಲೇಜು, ಹೆಣ್ಣು ಮಕ್ಕಳ ಕಾಲೇಜು ಆರಂಭಿಸಲು 100 ಕೋಟಿ ರೂ. ಮೊತ್ತವನ್ನು ಅನುಮೋದಿಸಲಾಗಿದೆ ಎಂದು ಇದೇ ಸಂದರ್ಭ ಸಚಿವರು ತಿಳಿಸಿದರು.
40 ಸಾವಿರ ರೂ. ನೆರವು: ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಜಿಲ್ಲೆಯಲ್ಲಿ 6 ಪಶುವೈದ್ಯಕೀಯ ಆಸ್ಪತ್ರೆಯ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಅವುಗಳಲ್ಲಿ ಸೋಮವಾರಪೇಟೆ ಹಾಗೂ ಅಂಕನಳ್ಳಿ ಎರಡು ಆಸ್ಪತ್ರೆಗಳ ಕಟ್ಟಡಗಳು ಲೋಕಾರ್ಪಣೆಗೊಂಡಿವೆ. ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆಯಿಂದ ಎಷ್ಟೋ ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಹೈನುಗಾರಿಕೆಯಿಂದಲೇ ಅನೇಕರು ವಿದ್ಯಾಭ್ಯಾಸ ಮುಗಿಸಿ ಉನ್ನತ ಸ್ಥಾನದಲ್ಲಿದ್ದಾರೆ. ಈ ಕಾರಣದಿಂದ ಪಶುಸಂಗೋಪನೆಗೆ ಸರ್ಕಾರ ಹೆಚ್ಚಿನ ಅನುದಾನ ನೀಡುತ್ತಿದೆ. ಇಲಾಖೆಯ ಯೋಜನೆಯನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಸ ಫಲಾನುಭವಿಗಳಿಗೆ ಪಶುಸಂಗೋಪನೆಗೆ 40 ಸಾವಿರ ರೂ.ಗಳನ್ನು ಸರ್ಕಾರ ಉಚಿತವಾಗಿ ನೀಡಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಜಿಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ರಾಜೇಶ್, ಉಪಾಧ್ಯಕ್ಷ ಅಭಿಮನ್ಯು ಕುಮಾರ್, ಸದಸ್ಯೆ ತಂಗಮ್ಮ, ಜಿಪಂ ಸದಸ್ಯರಾದ ಕೆ.ಆರ್.ಮಂಜುಳ, ಸರೋಜಮ್ಮ, ಪೂರ್ಣಿಮಾ ಗೋಪಾಲ್, ಬಿ.ಜೆ.ದೀಪಕ್, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಎಸ್.ಪಿ.ಕ್ಷಮಾ ಮಿಶ್ರಾ, ಪಶು ಇಲಾಖೆಯ ಉಪನಿರ್ದೇಶಕ ಡಾ.ಎ.ಬಿ.ತಮ್ಮಯ್ಯ ಇದ್ದರು.