ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. ದುಬೈನಿಂದ ಮಾ.11 ರಂದು ಧಾರವಾಡಕ್ಕೆ ಆಗಮಿಸಿದ್ದ 35 ವರ್ಷದ ವ್ಯಕ್ತಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.
ಮೆಕ್ಕಾದಿಂದ ಗೌರಿಬಿದನೂರಿಗೆ ಬಂದಿದ್ದ 22 ವರ್ಷದ ಮಹಿಳೆಯೊಬ್ಬರು ಸೋಂಕಿರುವುದು ದೃಢವಾಗಿದೆ. ಬೆಂಗಳೂರಿನಿಂದ ಸ್ವಿಟ್ಜರ್ಲ್ಯಾಂಡ್ಮತ್ತು ಫ್ರಾನ್ಸ್ ಗೆ ಪ್ರಯಾಣಿಸಿದ್ದ 36 ವರ್ಷದ ಮಹಿಳೆ ಮಾ.9 ರಂದು ವಾಪಾಸಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜರ್ಮನಿಗೆ ಪ್ರಯಾಣ ಮಾಡಿ ವಾಪಾಸಾಗಿದ್ದ ಬೆಂಗಳೂರಿನ 27 ವರ್ಷದ ಯುವಕ, ಲಂಡನ್ ನಿಂದ ವಾಪಾಸ್ಸಾಗಿರುವ ಬೆಂಗಳೂರಿನ 51 ವರ್ಷದ ವ್ಯಕ್ತಿ ಹಾಗೂ ದುಬೈನಿಂದ ವಾಪಾಸ್ಸಾಗಿದ್ದ 22 ವರ್ಷದ ಯುವಕ ಸೇರಿ ಭಾನುವಾರ ಒಟ್ಟು 6 ಮಂದಿಗೆ ಕೊರೋನಾ ಸೋಂಕಿರುವುದು ದೃಢಪಟ್ಟಿದೆ.
ರಾಜ್ಯದ ಗಡಿ ಭಾಗಗಳು ಬಂದ್: ಕೊರೋನಾ ಸೋಂಕಿತರು ಬೇರೆ ರಾಜ್ಯಗಳಿಂದ ಆಗಮಿಸುವ ಹಿನ್ನಲೆ ರಾಜ್ಯದ ಗಡಿಗಳನ್ನು ಬಂದ್ ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದು ಗೋವಾ, ತಮಿಳುನಾಡು, ಕಾಸರಗೋಡು, ಸೇರಿದಂತೆ ರಾಜ್ಯ ಗಡಿಭಾಗಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಸರ್ಕಾರ ತೀರ್ಮಾನಿಸಿದ್ದು, ಬೇರೆ ರಾಜ್ಯಗಳಿಂದ ಬರುವವರ ಮೇಲೂ ರಾಜ್ಯ ಸರ್ಕಾರ ಕಣ್ಣಿಟ್ಟಿದೆ.