Saturday, July 2, 2022

Latest Posts

ರಾಜ್ಯದಲ್ಲಿ 15 ದಿನ ಲಾಕ್ ಡೌನ್ ವಿಸ್ತರಣೆಗೆ ಒಪ್ಪಿದ ಸಂಪುಟ ಸಭೆ: ಪ್ರಧಾನಿ ಜೊತೆ ಸಭೆಯ ಬಳಿಕ ನಿರ್ಧಾರ

ಬೆಂಗಳೂರು: ಕೊರೋನಾ ವೈರಸ್ ದಿನೇ ದಿನೇ ವ್ಯಾಪಕವಾಗುತ್ತಿರುವ ಹಿನ್ನಲೆ ರಾಜ್ಯದಲ್ಲಿ ಇನ್ನು 15ದಿನಗಳ ಕಾಲ ಲಾಕ್ ಡೌನ್ ವಿಸ್ತರಿಸಿದರೆ ಉತ್ತಮ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ಇಂದು ನಡೆದ ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್ ವೈ, ಸಭೆಯಲ್ಲಿ ಲಾಕ್ ಡೌನ್ ವಿಸ್ತರಣೆಯ ಕುರಿತಾಗಿ ಚರ್ಚೆ ನಡೆಸಲಾಯಿತು. ಏ.14ರ ಬಳಿಕ ರಾಜ್ಯದಲ್ಲಿ ಯಾವ ಜಿಲ್ಲೆಗಳನ್ನು ಲಾಕ್ ಡೌನ್ ಮಾಡುವುದು ಹಾಗೂ ಯಾವ ಜಿಲ್ಲೆಗಳನ್ನು ಲಾಕ್ ಡೌನ್ ನಿಂದ ಮುಕ್ತಗೊಳಿಸುವುದು ಎಂದು ಚರ್ಚಿಸಲಾಯಿತು. ಉಳಿದಂತೆ ವಿಸ್ತರಣೆ ಕುರಿತಾಗಿ ಪ್ರಧಾನಿ ಮೋದಿ ಅವರ ನಿರ್ಧಾರದ ಬಳಿಕ ನಾವು ಕ್ರಮ ಕೈಗೊಳ್ಳುತ್ತೇವೆ ಎಂದರು.

ಲಾಕ್ ಡೌನ್ ಕುರಿತಾಗಿ ಪ್ರಧಾನಿ ಮೋದಿ ಏ.11ರಂದು ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಲಿದ್ದು, ಸಭೆಯಲ್ಲಿ ಪ್ರಧಾನಿ ಮೋದಿ ಕೈಗೊಳ್ಳುವ ತೀರ್ಮಾನದ ಬಳಿಕ ರಾಜ್ಯದಲ್ಲಿ ಲಾಕ್ ಡೌನ್ ವಿಸ್ತರಣೆ ವಿಚಾರ ಖಚಿತವಾಗಲಿದೆ ಎಂದು ತಿಳಿಸಿದರು.

ರಾಜ್ಯದ ಸಚಿವರು, ಶಾಸಕರು ವೇತನದಲ್ಲಿ ಶೇ.30ರಷ್ಟು ವೇತನವನ್ನು ಕೋವಿಡ್-19 ನಿಧಿಗೆ ನೀಡಲಾಗುತ್ತದೆ. ಇದರಿಂದ ಸುಮಾರು 15.3 ಕೋಟಿ ರೂ.ನಷ್ಟು ಮೊತ್ತವನ್ನು ಕೊರೋನಾ ವಿರುದ್ಧ ಹೋರಾಟಕ್ಕೆ ಬಳಸಲಾಗುತ್ತದೆ. ಈ ಕುರಿತು ಸಭೆಯಲ್ಲಿ ಚರ್ಚೆ ನಡೆಸಿ ಸುಗ್ರೀವಾಜ್ಞೆಯಲ್ಲಿ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕೊರೋನಾ ತಡೆಯಲು ಕನಿಷ್ಠ 15 ದಿನಗಳ ಲಾಕ್ ಡೌನ್ ಅವಶ್ಯಕತೆ ಇದೆ ಎಂದು ಬಹುತೇಕ ಸಚಿವರು ಸಲಹೆ ನೀಡಿದ್ದಾರೆ. ಈಗಾಗಲೆ ಇರುವ ಲಾಕ್ ಡೌನ್ ಏ.14ರವರೆಗೂ ಮುಂದುವರೆಯಲಿದ್ದು, ಜನರೂ ಅನಗತ್ಯ ಮನೆಯಿಂದ ಹೊರಗೆ ಬರಬಾರದೆಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಈಗಾಗಲೇ 2 ತಿಂಗಳಿಗೆ ಬೇಕಾದ ಪಡಿತರ ವಿತರಣೆ ಮಾಡಲಾಗುತ್ತಿದ್ದು, ಇನ್ನು ಕೆಲವು ದಿನಗಳಲ್ಲಿ ಕೇಂದ್ರದಿಂದಲೂ ಪಡಿದರ ಸೌಲಭ್ಯ ಸಿಗುತ್ತದೆ ಎಂದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss