Sunday, August 14, 2022

Latest Posts

ರಾಜ್ಯದ ಎಲ್ಲಾ ನದಿಗಳ ಸಮಸ್ಯೆಗಳನ್ನು ಶೀಘ್ರದಲ್ಲೇ ಸರಿಪಡಿಸುತ್ತೇವೆ: ರಮೇಶ್ ಜಾರಕಿಹೊಳಿ

ಮೈಸೂರು: ರಾಜ್ಯದ ಎಲ್ಲಾ ನದಿಗಳ ಸಮಸ್ಯೆಗಳನ್ನು ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಸರಿಪಡಿಸುತ್ತೇವೆ. ವೈಯಕ್ತಿಕ ಹಾಗೂ ರಾಜಕೀಯವಾಗಿ ನಮ್ಮ ರಾಜ್ಯದ ರೈತ ಭಾಂದವರಿಗೆ ನದಿ ಕೊನೆಯ ಭಾಗವನ್ನು ಮುಟ್ಟುವವರೆಗೂ ಕುಡಿಯಲು ಹಾಗೂ ಕೃಷಿಗೆ ನೀರು ಪೂರೈಸುವಂತಹ ಕೆಲಸವನ್ನು ಮಾಡುತ್ತೇವೆ ಎಂದು ಜಲ ಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ ತಿಳಿಸಿದರು.

ಗುರುವಾರ ಮೈಸೂರು ಜಿಲ್ಲೆಯ ಹೆಚ್.ಡಿ ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯಕ್ಕೆ ಭೇಟಿ ನೀಡಿ, ಜಲಾಶಯ ಪರಿವೀಕ್ಷಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಸಂಕಷ್ಟದ ಕಾಲದಲ್ಲಿ ಅತ್ಯುತ್ತಮವಾದ ಆರ್ಥಿಕ ಪ್ಯಾಕೇಜ್ ಘೋಷಿಸಿದೆ. ಅದರಲ್ಲಿ ಜಲ ಸಂಪನ್ಮೂಲ ಇಲಾಖೆಗೆ ಎಷ್ಟು ಸಿಗುತ್ತದೆ ಎಂಬುದು ಶೀಘ್ರದಲ್ಲೇ ತಿಳಿಯಲಿದೆ ಎಂದು ಮಾಹಿತಿ ನೀಡಿದರು.

ಇಲಾಖೆವಾರು ಎಲ್ಲಾ ಜಲಾಶಯಗಳನ್ನು ವೀಕ್ಷಣೆ ಮಾಡಿದ್ದೇನೆ. ಕೃಷಿಗೆ ನೀರು ಹರಿಸುವ ವಿಚಾರ ಸಂಬಂಧ ಈಗಾಗಲೇ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆದಿದ್ದು, ರಾಜ್ಯದ ಜಲಾಶಯಗಳ ಸ್ಥಿತಿಗತಿ ಗಮನಿಸಿ ತೀರ್ಮಾನ ಕೈಗೊಳ್ಳಲಾಗುವುದು. ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅಲ್ಲಿನ ಲೋಪದೋಷಗಳನ್ನು ಬಗೆಹರಿಸುತ್ತೇನೆ ಎಂದು ಹೇಳಿದರು.
ರಾಜ್ಯದಲ್ಲಿ ಉತ್ತಮವಾದ ಮಳೆಯಾಗಿದ್ದು, ಕುಡಿಯಲು ಮತ್ತು ಕೃಷಿಗೆ ಯಾವುದೇ ರೀತಿ ನೀರಿನ ಅಭಾವ ಇಲ್ಲ. ಕಾವೇರಿ ಹಾಗೂ ಕಬಿನಿ ಜಲಾಶಯಗಳು ಅಂತರರಾಜ್ಯ ಸಂಬಂಧ ಹೊಂದಿವೆ. ಈ ಜಲಾಶಯಗಳಿಂದ ನೀರು ಹರಿಸಲು ಕೇಂದ್ರೀಯ ಜಲ ಮಂಡಳಿಯಲ್ಲಿ ಅಧಿಕಾರಿಗಳ ಸಭೆ ನಡೆದಿದೆ. ಅಂತರ್ಜಲ ಮಟ್ಟ ಹೆಚ್ಚಿಸಲು ಇಲಾಖೆ ವತಿಯಿಂದ ಕಾರ್ಯಕ್ರಮ ರೂಪಿಸಲಾಗುವುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಅನಿಲ್ ಚಿಕ್ಕಮಾದು, ಜಿಲ್ಲಾ ಪಂಚಾಯತ್ ಅದ್ಯಕ್ಷರಾದ ಪರಿಮಳಾ ಶ್ಯಾಂ, ತಹಸೀಲ್ದಾರಾದ ಮಂಜುನಾಥ್, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಮಂಜುಳ ದೇವಣ್ಣ, ಮಾಜಿ ಸಚಿವ ಎಂ.ಶಿವಣ್ಣ, ಮಾಜಿ ವಿಧಾನ ಪರಿಷತ್ತ್ ಸದಸ್ಯ ಸಿದ್ದಾರಾಜು, ಮುಖ್ಯ ಇಂಜಿನೀಯರ್ ಶಂಕರೇಗೌಡ, ತಾಲ್ಲೂಕು ಪಂಚಾಯತ್ ಇಓ ರಾಮಲಿಂಗಯ್ಯ, ನೋಡೆಲ್ ಅಧಿಕಾರಿ ಗಿರೀಶ್, ತಾಲ್ಲೂಕು ಆರೋಗ್ಯ ಅಧಿಕಾರಿ ರವಿಕುಮಾರ್ ಇನ್ನಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss