ಬೆಂಗಳೂರು:ಆಸ್ತ್ರಾ ಜನಿಕಾ ಸಂಸ್ಥೆ ನಡೆಸಿದ ಕೋವಿಡ್ ಲಸಿಕೆಯ ಮೊದಲ ಹಂತದ ಪ್ರಯೋಗ ಯಶಸ್ವಿಯಾಗಿದ್ದು, 2021 ರ ಪ್ರಾರಂಭದಲ್ಲಿಯೇ ಲಸಿಕೆ ಲಭ್ಯವಾಗುವ ನಿರೀಕ್ಷೆ ಇದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದರು.
ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಕೊರೊನಾ ಲಸಿಕೆಯ ಸಂಶೋಧನೆ ಮತ್ತು ಪ್ರಾಯೋಗಿಕ ಪರೀಕ್ಷೆಯಲ್ಲಿ ತೊಡಗಿರುವ ಆಸ್ತ್ರಾ ಜೆನೆಕಾ ಸಂಸ್ಥೆಯ ಪ್ರತಿನಿಧಿಗಳು ಲಸಿಕೆ ಅಭಿವೃದ್ಧಿಯ ಪ್ರಗತಿ, ಅದರ ಸಾಧಕ-ಬಾಧಕಗಳ ಕುರಿತು ವಿಧಾನಸೌಧದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮಾಹಿತಿ ನೀಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು,
ಇಡೀ ವಿಶ್ವವೇ ಕೋವಿಡ್ ಲಸಿಕೆಗಾಗಿ ಕಾಯುತ್ತಿದೆ. ಆಕ್ಸ್ವರ್ಡ್ ವಿಶ್ವವಿದ್ಯಾಲಯವು ಆಸ್ತ್ರಾ ಜನಿಕಾ ಸಂಸ್ಥೆ ಸಹಯೋಗದೊಂದಿಗೆ ಭಾರತದಲ್ಲಿ ಕೊರೋನ ಲಸಿಕೆಯ ಸಂಶೋಧನೆ ಪ್ರಾರಂಭಿಸಿದ್ದು, ಮೊದಲನೇ ಹಂತದ ಪ್ರಯೋಗ ಯಶಸ್ವಿಯವಾಗಿದೆ. ಮೊದಲ ಹಂತದಲ್ಲಿ 18 ವರ್ಷ ಮೇಲ್ಪಟ್ಟ ಆರೋಗ್ಯವಂತ 1600 ಜನರಿಗೆ ಈ ಲಸಿಕೆಯನ್ನು ಪ್ರಯೋಗಿಸಲಾಗಿದೆ. 56 ದಿನಗಳಲ್ಲಿ ಇವರಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಯಾಗಿರುವುದು ಕಂಡು ಬಂದಿದೆ. ಎರಡನೇ ಹಂತದಲ್ಲಿ 7 ವರ್ಷ ಮೇಲ್ಪಟ್ಟ ಮಕ್ಕಳ ಮೇಲೆ ಪ್ರಯೋಗ ನಡೆಸಲಿದ್ದಾರೆ. ಈ ವೇಳೆ ಕೊರೋನ ಸೋಂಕಿತರ ಮೇಲೂ ಲಸಿಕೆ ಪ್ರಯೋಗಿಸುವುದಾಗಿ ತಿಳಿಸಿದ್ದಾರೆ. ಮೂರನೇ ಹಂತದಲ್ಲಿ 55 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಪ್ರಯೋಗಿಸಲಿದ್ದಾರೆ. ಈ ಎಲ್ಲಾ ಹಂತವೂ ಯಶಸ್ವಿಯಾದಲ್ಲಿ 2021 ರ ಪ್ರಾರಂಭದಲ್ಲಿಯೇ ಲಸಿಕೆ ಲಭ್ಯವಾಗಲಿದೆ ಎಂದು ಹೇಳಿದರು.
ಲಸಿಕೆ ಲಭ್ಯವಾದ ನಂತರ ಪ್ರತಿಯೊಬ್ಬರಿಗೂ ತಲುಪಿಸಲು ಪೂರ್ವಸಿದ್ಧತೆಗಳು ನಡೆಯುತ್ತಿದ್ದು ಸರಬರಾಜು, ಸಂಗ್ರಹಣೆ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳ ಬಗ್ಗೆ ಸಲಹೆ ನೀಡಲು ತಜ್ಞರ ಸಮಿತಿ ರಚಿಸಲಾಗಿದೆ. ಪ್ರಥಮ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ, ನಂತರ ವಯೋವೃದ್ಧರು ಮತ್ತು ಇತರೆ ಆರೋಗ್ಯ ಸಮಸ್ಯೆ ಹೊಂದಿರುವವರಿಗೆ ಲಸಿಕೆ ನೀಡಲಾಗುವುದು ಎಂದರು.
ಲಸಿಕೆ ಸಂಶೋಧನೆಯಲ್ಲಿ ತೊಡಗಿರುವ ಇತರೆ ಸಂಸ್ಥೆಗಳಾದ ಸೀರಮ್ ಇನ್ಸ್ಟಿಟ್ಯೂಟ್ , ಭಾರತ್ ಬಯೋಟೆಕ್ ಸಂಸ್ಥೆಗಳ ಜೊತೆಗೂ ಮುಂದಿನ ದಿನಗಳಲ್ಲಿ ಚರ್ಚೆ ನಡೆಸಲಾಗುವುದು. ಸೀರಮ್ ಇನ್ಸ್ಟಿಟ್ಯೂಟ್ನೊಂದಿಗೆ ಮೈಸೂರಿನ ಜೆಎಸ್ಎಸ್ ಸಂಸ್ಥೆ ಸಹಯೋಗದೊಂದಿಗೆ ಸಂಶೋಧನೆ ನಡೆಸುತ್ತಿದೆ ಎಂದರು.
ಲಸಿಕೆ ಲಭ್ಯವಾಗುವವರೆಗೂ ಅದರ ದರವನ್ನು ನಿಗದಿ ಮಾಡುವುದಾಗಲಿ ಅಥವಾ ಉಚಿತವಾಗಿ ನೀಡುವುದರ ಬಗ್ಗೆ ಹೇಳಿಕೆ ನೀಡುವುದು ಸೂಕ್ತವಲ್ಲ. ಮೊದಲು ಲಸಿಕೆ ಕೈ ಸೇರಲಿ. ನಮ್ಮ ಸರ್ಕಾರ ಜನರಿಗೆ ಕೊರೋನ ಪರೀಕ್ಷೆ, ಚಿಕಿತ್ಸೆ ಎಲ್ಲವನ್ನು ಉಚಿತವಾಗಿ ನೀಡಿದೆ. ಆದರೆ, ಲಸಿಕೆ ಬಗ್ಗೆ ಮೊದಲೇ ಹೇಳಿಕೆ ನೀಡುವುದು ಸರಿಯಲ್ಲ ಎಂದು ಹೇಳಿದರು.
ನಿಖರ ಮಾಹಿತಿ ನೀಡಿದ್ದೇವೆ: ಕರ್ನಾಟಕದಲ್ಲಿ ಕೋವಿಡ್ ಪ್ರಕರಣ, ಸಾವಿನ ಅಂಕಿಅಂಶವನ್ನು ನಿಖರವಾಗಿ ನೀಡಲಾಗುತ್ತಿದೆ ಎಂದು
ವಿಶ್ವ ಆರೋಗ್ಯ ಸಂಸ್ಥೆಯೇ ಹೇಳಿಕೆ ನೀಡಿದೆ. ತಪ್ಪು ಅಂಕಿ-ಅಂಶ ನೀಡುವ ಅವಶ್ಯಕತೆ ನಮ್ಮ ಸರ್ಕಾರಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು.