ಬೆಂಗಳೂರು: ವ್ಯವಹಾರವನ್ನು ಸುಲಭವಾಗಿ ಮಾಡುವ ನಿಟ್ಟಿನಲ್ಲಿ ಭೂ ಸುಧಾರಣೆ ಮತ್ತಿತರ ಕ್ರಮಕೈಗೊಳ್ಳನ್ನು ಕೈಗೊಂಡ ಬಳಿಕ ರಾಜ್ಯಸರ್ಕಾರ ಇದೀಗ ಬೆಂಗಳೂರು ಹಾಗೂ ರಾಜ್ಯದ ಇತರ ಭಾಗಗಳಲ್ಲಿ ಕೈಗಾರಿಕಾ ಟೌನ್ ಶಿಪ್ ಅಭಿವೃದ್ಧಿಪಡಿಸಲು ಯೋಜನೆ ಹಾಕಿಕೊಂಡಿದೆ.
ಟೌನ್ ಶಿಪ್ ಅಭಿವೃದ್ಧಿಗೆ ವಿಸ್ತೃತ ಪ್ರಸ್ತಾವನೆಯೊಂದನ್ನು ಸಿದ್ಧಪಡಿಸುವಂತೆ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಶನಿವಾರ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಕ್ಯಾಬಿನೆಟ್ ನಲ್ಲಿ ಅನುಮೋದನೆ ದೊರೆತ ಬಳಿಕ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು. ಕಾಸಿಯಾ ಆಯೋಜಿಸಿರುವ ಕೋವಿಡ್-19 ಉದ್ಯೋಗ ಸಹಾಯವಾಣಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಕೈಗಾರಿಕಾ ಟೌನ್ ಶಿಫ್ ಗೆ ಅನೇಕ ವರ್ಷಗಳಿಂದ ಬೇಡಿಕೆಯಿದೆ.
ಇದೀಗ ಈ ಯೋಜನೆಯನ್ನು ಕೈಗೆತ್ತಿಕೊಳ್ಳುವಂತೆ ನಗರಾಭಿವೃದ್ಧಿ ಸಚಿವರನ್ನು ಮನವೊಲಿಸಲಾಗಿದೆ. ಭೂಸ್ವಾಧೀನಕ್ಕೆ ಅಡಚಣೆಯಾಗುತ್ತಿರುವ ವಿವಿಧ ನಿಯಮಗಳನ್ನು ಸರಳೀಕರಿಸುವಲ್ಲಿ ರಾಜ್ಯವು ಈಗಾಗಲೇ ಕೆಲಸ ಮಾಡುತ್ತಿದೆ. ಕೈಗಾರಿಕೆಗಳು ಮತ್ತು ಕರ್ನಾಟಕವನ್ನು ಉದ್ಯಮ ಸ್ನೇಹಿ ರಾಜ್ಯವನ್ನಾಗಿ ಮಾಡಲಾಗುವುದು ಎಂದರು.
ಕೃಷಿಯೇತರ ಉದ್ಯಮಿಗಳು, ಕೃಷಿ ಭೂಮಿ ಕೊಳ್ಳಲು ಅವಕಾಶ ನೀಡುವ ರಾಜ್ಯ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯಸರ್ಕಾರ ಇತ್ತೀಚಿಗೆ ನಿರ್ಧರಿಸಿತ್ತು. ಕೈಗಾರಿಕೆಗಳಿಗಾಗಿ ಭೂ ಸ್ವಾಧೀನಕ್ಕೆ ದರ ನಿಗದಿಪಡಿಸಲು ಹೊಸ ವೈಜ್ಞಾನಿಕ ನೀತಿಯೊಂದನ್ನು ರೂಪಿಸುವಂತೆ ಅಧಿಕಾರಿಗಳಿಗೆ ಶೆಟ್ಟರ್ ತಿಳಿಸಿದ್ದಾರೆ. ಸರ್ಕಾರ ಕೈಗಾರಿಕಾ ನೀತಿಯೊಂದನ್ನು ರೂಪಿಸುತ್ತಿದ್ದು, ಅದಕ್ಕೆ ಹಣಕಾಸು ಇಲಾಖೆಯ ಅನುಮೋದನೆಗಾಗಿ ಕಾಯಲಾಗುತ್ತಿದೆ. ಹೊಸ ನೀತಿಯಲ್ಲಿ ಎರಡು ಹಾಗೂ ಮೂರನೇ ಹಂತದ ನಗರಗಳಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಗಮನ ನೀಡಲಿದೆ ಎಂದು ಶೆಟ್ಟರ್ ತಿಳಿಸಿದರು.