ಬೆಂಗಳೂರು: ರಾಜ್ಯದ ಹಲವೆಡೆಗಳಲ್ಲಿ ಗುರುವಾರ ಭಾರೀ ಮಳೆಯಾಗುತ್ತಿದೆ.
ಕಲಬುರಗಿ , ರಾಯಚೂರು, ಬೀದರ್ ಹಾಗೂ ಬಳ್ಳಾರಿ ಭಾಗಗಳು ವರುಣನ ಅಬ್ಬರಕ್ಕೆ ತತ್ತರಿಸಿದ್ದು ಈಗಾಗಲೇ ಕೊರೋನಾ ಸಂಕಷ್ಟದಲ್ಲಿರುವ ಜನತೆ ಮುಸಲಧಾರೆಗೆ ತತ್ತರಿಸಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ಮಳೆ ತೀವ್ರಗೊಂಡಿದ್ದು ಭಾರಿ ಮಳೆಗೆ ಸಂಡೂರಿನ ಮೈನಿಂಗ್ನಲ್ಲಿ ಮಣ್ಣು ಕುಸಿದಿದೆ. ಇದರ ಪರಿಣಾಮವಾಗಿ ಮೈನಿಂಗ್ ವಾಹನ ಚಾಲಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹೊಸಪೇಟೆ ತಾಲೂಕಿನ ಡಣಾಯಕನಕೆರೆ ಕೋಡಿ ಒಡೆದು ನೀರು ನುಗ್ಗಿದ ಪರಿಣಾಮ ನೂರಾರು ಎಕರೆ ಕೃಷಿ ನಾಶವಾಗಿದೆ. ಇನ್ನು
ಕಲಬುರಗಿ ಜಿಲ್ಲೆಯಲ್ಲಿಯೂ ಮಳೆ ಮುಂದುವರಿದಿದ್ದು, ಮಳೆಗೆ ನದಿ, ಹಳ್ಳ-ಕೊಳ್ಳಗಳು ತುಂಬಿವೆ. ಹಲವೆಡೆ ತಗ್ಗುಪ್ರದೇಶಗಳು ಜಲಾವೃತವಾಗಿದೆ. ಚಿಂಚೋಳಿ ತಾಲೂಕಿನ ಕಾಳಗಿ ಸೇತುವೆ ಮಳೆಯಿಂದಾಗಿ ಸಂಪೂರ್ಣ ಜಲಾವೃತವಾಗಿದ್ದು. ಮೂರ್ನಾಲ್ಕು ಗ್ರಾಮಗಳು ಅಪಾಯದ ಸ್ಥಿತಿಯಲ್ಲಿ ನೆರೆಭೀತಿ ಎದುರಿಸುತ್ತಿವೆ.
ರಾಯಚೂರು ಭಾಗದಲ್ಲಿಯೂ ಮಳೆ ಮುಂದುವರಿದಿದ್ದು. ಸಿಂಧನೂರು ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಮಳೆ ನೀರು ಹಲವು ಅವಾಂತರ ಸೃಷ್ಟಿಸಿದೆ. ಬಸವಕಲ್ಯಾಣ, ಬೀದರ್, ಭಾಲ್ಕಿ, ಚಿಟಗುಪ್ಪಾ, ಹುಮನಾಬಾದ್ ತಾಲೂಕಿನಲ್ಲಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ.