Tuesday, June 28, 2022

Latest Posts

ರಾಜ್ಯದ 272 ಸಾರ್ವಜನಿಕ ಗ್ರಂಥಾಲಯಗಳು ಡಿಜಿಟಲೀಕರಣ: ಸತೀಶ್ ಕುಮಾರ್ ಹೊಸಮನಿ

ಕೊಡಗು: ರಾಜ್ಯದ ಸಾರ್ವಜನಿಕ ಗ್ರಂಥಾಲಯ ಕಾಯ್ದೆ 1965ರ ಅನ್ವಯ ರಾಜ್ಯದಲ್ಲಿ ಸಮಗ್ರವಾಗಿ ಸಾರ್ವಜನಿಕ ಗ್ರಂಥಾಲಯ ವ್ಯವಸ್ಥೆಯನ್ನು ಕಾರ್ಯ ರೂಪಕ್ಕೆ ತರಲಾಗಿದ್ದು, ರಾಜ್ಯದ ಎಲ್ಲಾ ಸಾರ್ವಜನಿಕ ಗ್ರಂಥಾಲಯಗಳನ್ನು ತಂತ್ರಜ್ಞಾನ ಮತ್ತು ಡಿಜಿಟಲ್ ಮೂಲ ಸೌಕರ್ಯಗಳೊಂದಿಗೆ ಆಧುನೀಕರಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆ ಕೈಗೆತ್ತಿಕೊಂಡಿದೆ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ.ಸತೀಶ್ ಕುಮಾರ್ ಎಸ್.ಹೊಸಮನಿ ಅವರು ತಿಳಿಸಿದ್ದಾರೆ.

ಜಿಲ್ಲಾ ಕೇಂದ್ರ ಮಡಿಕೇರಿಯ ಕೈಗಾರಿಕಾ ಬಡಾವಣೆಯಲ್ಲಿ 87 ಲಕ್ಷ ರೂ.ವಚ್ಚದಲ್ಲಿ ನಿರ್ಮಾಣಗೊಂಡ ಆಧುನೀಕರಣ ಗ್ರಂಥಾಲಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ಸಂದರ್ಭ ಅವರು ಈ ಮಾಹಿತಿ ನೀಡಿದರು.

ಪ್ರಸ್ತುತ ಸಾರ್ವಜನಿಕ ಗ್ರಂಥಾಲಯ ಇಲಾಖೆಯಡಿಯಲ್ಲಿ ರಾಜ್ಯ ಕೇಂದ್ರ ಗ್ರಂಥಾಲಯ, ಇಂದಿರಾ ಪ್ರಿಯದರ್ಶಿನಿ ಮಕ್ಕಳ ಗ್ರಂಥಾಲಯ, 30 ಜಿಲ್ಲಾ ಕೇಂದ್ರ ಗ್ರಂಥಾಲಯಗಳು, 26 ನಗರ ಕೇಂದ್ರ ಗ್ರಂಥಾಲಯಗಳು, 13 ಸಂಚಾರಿ ಗ್ರಂಥಾಲಯಗಳು, 488 ಶಾಖಾ ಗ್ರಂಥಾಲಯಗಳು, 82 ವಾಚನಾಲಯಗಳು, 5766 ಗ್ರಾಮ ಪಂಚಾಯಿತಿ ಗ್ರಂಥಾಲಯಗಳು, 100 ಕೊಳಚೆ ಪ್ರದೇಶ ಗ್ರಂಥಾಲಯಗಳು, 127 ಅಲೆಮಾರಿ ಗ್ರಂಥಾಲಯಗಳು ಮತ್ತು 31 ಸಮುದಾಯ ಮಕ್ಕಳ ಕೇಂದ್ರ ಗ್ರಂಥಾಲಯಗಳು ಕಾರ್ಯನಿರ್ವಹಿಸುತ್ತಿವೆ ಎಂದು ಅವರು ವಿವರಿಸಿದರು.

272 ಗ್ರಂಥಾಲಯಗಳ ಡಿಜಿಟಲೀಕರಣ: ಸಾರ್ವಜನಿಕ ಗ್ರಂಥಾಲಯ ಇಲಾಖೆಯು, ಸಾರ್ವಜನಿಕ ಗ್ರಂಥಾಲಯಗಳನ್ನು ತಂತ್ರಜ್ಞಾನ ಮತ್ತು ಡಿಜಿಟಲ್ ಮೂಲ ಸೌಕರ್ಯಗಳೊಂದಿಗೆ ಆಧುನೀಕರಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಆ ದಿಸೆಯಲ್ಲಿ ರಾಜ್ಯದಲ್ಲಿ ಗ್ರಂಥಾಲಯಗಳನ್ನು ಡಿಜಿಟಲೀಕರಣಗೊಳಿಸಲು ಮತ್ತು ಇಷ್ಟು ದೊಡ್ಡ ಪ್ರಮಾಣದಲ್ಲಿ ಕಲಿಕೆಗೆ ಪ್ರವೇಶವನ್ನು ಒದಗಿಸಲು ರಾಜ್ಯ ಮಟ್ಟದ ಉಪಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಅವರು ನುಡಿದರು.

ಕರ್ನಾಟಕ ರಾಜ್ಯದಾದ್ಯಂತ ಡಿಜಿಟಲ್ ಯೋಜನೆ ಅಡಿಯಲ್ಲಿ 26 ನಗರ ಕೇಂದ್ರ ಗ್ರಂಥಾಲಯಗಳು, 30 ಜಿಲ್ಲಾ ಕೇಂದ್ರ ಗ್ರಂಥಾಲಯಗಳು ಹಾಗೂ 216 ತಾಲೂಕು ಗ್ರಂಥಾಲಯಗಳು, ಒಟ್ಟು 272 ಸಾರ್ವಜನಿಕ ಗ್ರಂಥಾಲಯಗಳನ್ನು ಒಳಗೊಂಡಿವೆ ಎಂದು ಅವರು ತಿಳಿಸಿದರು.

ಈ ಯೋಜನೆಯಡಿ ಡಿಜಿಟಲ್ ಲೈಬ್ರರಿ ಸಾಫ್ಟ್‍ವೇರ್ ಮತ್ತು ಇ-ಸಂಪನ್ಮೂಲಗಳನ್ನು ಹಾಗೂ ಎಲ್ಲಾ 272 ಸಾರ್ವಜನಿಕ ಗ್ರಂಥಾಲಯಗಳಲ್ಲಿ ಆಲ್‍ಇನ್ ಒನ್ ಡೆಸ್ಕ್‍ಟಾಪ್ (2 ಸಂಖ್ಯೆಗಳು), ಟ್ಯಾಬ್ಲೆಟ್(4 ಸಂಖ್ಯೆಗಳು), ಯುಪಿಎಸ್(1 ಸಂಖ್ಯೆ) ಮತ್ತು ವೈಫೈ ರೂಟರ್ (1 ಸಂಖ್ಯೆ) ನಂತಹ ಹಾರ್ಡ್‍ವೇರ್ ಜೊತೆಗೆ ಕ್ಲೌಡ್ ಹೋಸ್ಟ್ ಮಾಡಲಾಗಿದೆ. ಶಿಕ್ಷಣ ಮತ್ತು ಕಲಿಕಗೆ ಅಗತ್ಯವಿರುವ ಎಲ್ಲಾ ವಿಭಾಗಗಳಲ್ಲಿನ ವಿಷಯ ಒಳಗೊಂಡ ಇತ್ತೀಚಿನ ತಂತ್ರಜ್ಞಾನದೊಂದಿಗೆ ಡಿಜಿಟಲ್ ಗ್ರಂಥಾಲಯವನ್ನು ನಿರ್ಮಿಸಲಾಗಿದೆ ಎಂದು ಅವರು ನುಡಿದರು.

ಕಲೆ ಮತ್ತು ಮಾನವಿಕತೆಗಳು 6037, ವಾಣಿಜ್ಯ ಮತ್ತು ನಿರ್ವಹಣೆ 7075, ವಿಜ್ಞಾನ ಮತ್ತು ತಂತ್ರಜ್ಞಾನ 7745, ಸ್ಪರ್ಧಾತ್ಮಕ ಮತ್ತು ವಿವಿಧ ಪ್ರವೇಶ ಪರೀಕ್ಷೆಗಳಿಗೆ 968, ಶಾಲಾ ಶಿಕ್ಷಣ 5915, ವ್ಯಕ್ತಿತ್ವ ಮತ್ತು ಕೌಶಲ್ಯಗಳು 2944, ಶಾಸ್ತ್ರೀಯ ಮತ್ತು ಸಾಹಿತ್ಯ 7112, ವಿರಾಮ ಓದುವಿಕೆ 4,893 ಶೀರ್ಷಿಕೆ, ಪ್ರಯೋಗಾಲಯಗಳು/ಖಾನ್ ಅಕಾಡೆಮಿ 800, ಮ್ಯಾಗಜೀನ್/ ಪತ್ರಿಕೆಗಳು 364, ನಿಯತಕಾಲಿಕಗಳು 59,990 ಒಟ್ಟು 1,03,843 ಶೀರ್ಷಿಕೆಗಳನ್ನು ಒಳಗೊಂಡಿದೆ ಎಂದರು.

ರಾಜ್ಯ ಮತ್ತು ಸಿಬಿಎಸ್‍ಇ ಮಂಡಳಿಯ ಪಠ್ಯಕ್ರಮದ ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು ಡಿಜಿಟಲ್ ರೂಪದಲ್ಲಿ ಮಾಹಿತಿ ಸಹ ಒದಗಿಸುತ್ತದೆ ಎಂದು ಇಲಾಖೆಯ ನಿರ್ದೇಶಕರು ತಿಳಿಸಿದರು.

4ಸಾವಿರಕ್ಕೂ ಅಧಿಕ ಇ-ಪುಸ್ತಕ: ಕಲೆ ಮತ್ತು ಮಾನವಿಕತೆ ವ್ಯಕ್ತಿತ್ವ ಕೌಶಲ್ಯ ಮತ್ತು ಸಾಹಿತ್ಯವನ್ನು ಒಳಗೊಂಡಂತೆ ಶಾಲೆ, ಕಾಲೇಜು ಮುಂತಾದ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಸುಮಾರು 5 ಸಾವಿರಕ್ಕೂ ಹೆಚ್ಚು ಕನ್ನಡ ವಿಷಯಗಳಿವೆ. ನಿರ್ದಿಷ್ಟವಾಗಿ ರಾಜ್ಯ ಮತ್ತು ಸಿಬಿಎಸ್‍ಇ ಶಾಲಾ ಮಕ್ಕಳಿಗೆ ಪಠ್ಯಕ್ರಮದ ಪ್ರಕಾರ ಇ-ಪುಸ್ತಕಗಳು ಮತ್ತು ವೀಡಿಯೋಗಳನ್ನು ಒದಗಿಸಲಾಗಿದ್ದು, 1 ರಿಂದ 12 ನೇ ತರಗತಿಯವರೆಗೆ ಸಂಪೂರ್ಣ ವಿಷಯಗಳನ್ನು ಒಳಗೊಂಡಿದೆ. ಕನ್ನಡದಲ್ಲಿ ಸುಮಾರು 4,200ಕ್ಕೂ ಹೆಚ್ಚು ಇ-ಪುಸ್ತಕಗಳಿವೆ ಮತ್ತು ಕನ್ನಡ ಭಾಷೆಯಲ್ಲಿ ಸುಮಾರು 600ಕ್ಕೂ ಹೆಚ್ಚು ವೀಡಿಯೋಗಳಿವೆ ಎಂದರು.

ಐಐಟಿ, ಜೆಇಇ, ನೀಟ್ ಮತ್ತಿತರ ಒಳಗೊಂಡ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ ಸಾಮಗ್ರಿಗಳಿವೆ. ಇದು ಹೆಚ್ಚಿನ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿಯಾಗಿದೆ. ಅಲ್ಲದೆ, ವಿದ್ಯಾರ್ಥಿಗಳಿಗೆ ಭೌತಿಕ ಪ್ರಯೋಗಾಲಯದಲ್ಲಿ ನಿರ್ವಹಿಸಲು ಸಾಧ್ಯವಾಗದ ಪ್ರಯೋಗಗಳನ್ನು ಈ ವೇದಿಕೆಯು ಡಿಜಿಟಲ್ ರೂಪದಲ್ಲಿ ಸಿಮ್ಯುಲೇಶನ್‍ಗಳ ರೂಪದಲ್ಲಿ ಒದಗಿಸುತ್ತದೆ ಎಂದು ಅವರು ತಿಳಿಸಿದರು.

ಪ್ಲೇ ಸ್ಟೋರ್‍ನಲ್ಲಿ ‘e-Sarvajanika Granthalaya’ ’ಎಂಬ ಆಪ್ ಲಭ್ಯವಿದೆ. ಯೋಜನೆಯ ಭಾಗವಾಗಿ ರಾಜ್ಯದ ವಿವಿಧ ಜಿಲ್ಲೆಗಳ 10 ಲಕ್ಷ ಸರ್ಕಾರಿ ಶಾಲೆ ಮತ್ತು ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಗುಣಮಟ್ಟದ ಕಲಿಕಾ ಸಾಮಗ್ರಿಗಳನ್ನು ಒದಗಿಸಲಾಗುತ್ತಿದೆ ಎಂದು ಅವರು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss